







ಮಡಿಕೇರಿ ಏ.15 NEWS DESK : ಕಾಂತೂರು-ಮೂರ್ನಾಡು ಐಕಾನಿಕ್ ಬ್ರದರ್ಸ್ ವತಿಯಿಂದ ಕೊಡಗು ಗೌಡ 4ನೇ ವರ್ಷದ ವಾಲಿಬಾಲ್ ಪಂದ್ಯಾವಳಿ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಉಳುವಾರನ ಆಟದ ಬಾಣೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕ್ರೀಡೆಯನ್ನು ನಡೆಸುವುದರಿಂದ ಜನಾಂಗದ ಒಗ್ಗಟ್ಟಿಗೆ ಸಹಕಾರಿಯಾಗಿದೆ. ಉತ್ತಮ ಗುರಿ ಮುಟ್ಟಲು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಮುಖ್ಯ ಎಂದು ಹೇಳಿದರು. ಮಠದ ಮನೆ ಧನಂಜಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಿಂದ ಮನಸ್ಸು ಉಲ್ಲಾಸವಾಗುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮವಾಗಿ ಕಾಣಬೇಕು ಎಂದು ಹೇಳಿದರು. ಸಮಾರೋಪ ಸಮಾರಂಭದಲ್ಲಿ ಮಾಜಿ ಸಭಾಪತಿ ಕೊಂಬಾರನ ಜಿ.ಬೋಪಯ್ಯ ಮಾತನಾಡಿ, ಕ್ರೀಡೆಯನ್ನು ನಡೆಸುವುದರಿಂದ ಯುವ ಪ್ರತಿಭೆಗಳಿಗೆ ಪ್ರತಿಭಾ ಅನಾವಣಗೊಳಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಬಾಳಾಡಿ ಮನೋಜ್ ಮಾತನಾಡಿ, ಒಂದು ತಂಡವು ಒಟ್ಟಾಗಿ ಆಡುವುದರಿಂದ ಯಶಸ್ಸು ಲಭಿಸುತ್ತದೆ. ಯುವ ಜನಾಂಗ ತಮ್ಮ ಪ್ರತಿಭೆಯನ್ನು ಹೊರಹಾಕಲು ಉತ್ತಮ ಅವಕಾಶವಾಗಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲ್ಲುಮುಟ್ಲು ಆರ್.ವಿನೋದ್, ಇಂತಹ ಕ್ರೀಡೆಯನ್ನು ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಕ್ರೀಡೆಗೆ ಕಿರಿಯರು, ಹಿರಿಯರು ಎಂಬ ಬೇಧಭಾವ ಇಲ್ಲದೆ ಎಲ್ಲಾ ಕ್ರೀಡಾ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯಾಗಿದೆ ಎಂದರು. ಕಾರ್ಯಕ್ರಮವನ್ನು ಕಲ್ಲುಮುಟ್ಲು ಜಶ್ಮಿ ಚಿಂತು ನಿರೂಪಿಸಿದರು. ಕುಮುದಿನಿ ಮತ್ತು ತಂಡದವರು ಪ್ರಾರ್ಥಿಸಿದರು.
ಪಂದ್ಯಾವಳಿ ವಿಜೇತರು :: ಪುರುಷರ ವಾಲಿಬಾಲ್ ಪಂದ್ಯದಲ್ಲಿ ಪಡ್ಡ0ಬೈಲು ಕುಟುಂಬದ ತಂಡ ಜಯಶಾಲಿಯಾದರು. ಕೊಡಕಂಡಿ ಕುಟುಂಬ ದ್ವಿತೀಯ, ಕಡ್ಲೇರ ಕುಟುಂಬದ ತಂಡ ತೃತೀಯ ಹಾಗೂ ಬಾಳಾಡಿ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಚೆಟ್ಟಿಮಾಡ ಕುಟುಂಬ ಜಯ ಸಾಧಿಸಿತು. ಉಳುವಾರು (ಚೆಂಬು) ತಂಡ ದ್ವಿತೀಯ ಸ್ಥಾನ ಪಡೆದಕೊಂಡಿತು.