







ಮಡಿಕೇರಿ ಏ.15 NEWS DESK : ಮಡಿಕೇರಿಯ ಹಿಂದೂ ಮಲಯಾಳಿ ಸಂಘದ ವತಿಯಿಂದ ವಿಷು ಕಣಿ ಹಾಗೂ ವಿಷು ಕೈನೀಟಂ ಆಚರಣೆ ಅರ್ಥಪೂರ್ಣವಾಗಿ ನಡೆಯಿತು. ವಿಷು ಹಬ್ಬಕ್ಕೆ ಮುಖ್ಯವಾಗಿ ಬೇಕಾಗಿರುವ (ಕೊನ್ನ ಪೂ) ಹೊನ್ನೇ ಹೂವನ್ನು ಇದೇ ಸಂದರ್ಭ ವಿತರಿಸಲಾಯಿತು. ನಗರದ ಶ್ರೀ ಓಂಕಾರೇಶ್ವರ ದೇವಸ್ಥಾನದ ಬಳಿ ಇರುವ ಹರಿಹರ ಸರ್ವಿಸ್ ಸ್ಟೇಷನ್ ಆವರಣದಲ್ಲಿ ಮಲಯಾಳಿ ಬಂಧುಗಳು ಹಬ್ಬದ ಸಡಗರವನ್ನು ಹಂಚಿಕೊಂಡರು. ಮಡಿಕೇರಿ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ವಿ.ಧರ್ಮೇಂದ್ರ ಮಾತನಾಡಿ ಹಬ್ಬಗಳ ಆಚಾರ ವಿಚಾರಗಳನ್ನು ಮಕ್ಕಳಿಗೆ ತಿಳಿ ಹೇಳುವ ಮೂಲಕ ನಮ್ಮ ಸಂಪ್ರದಾಯವನ್ನು ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗುವಂತೆ ನೋಡಿಕೊಳ್ಳಬೇಕು ಎಂದರು. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿ ಗುರು ಹಿರಿಯರಿಗೆ ಗೌರವ ನೀಡುವುದನ್ನು ಕಲಿಸಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ಕರೆ ನೀಡಿದ ಅವರು, ವಿಷು ಆಚರಣೆಯ ಕುರಿತು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ಶ್ರೀಮುತ್ತಪ್ಪ ದೇವಾಲಯದ ಅಧ್ಯಕ್ಷರಾದ ಟಿ.ಕೆ.ಸುಧೀರ್ ಹೊಸ ವರ್ಷ ಆಚರಣೆಯ ವಿಷು ಹಬ್ಬವು ಮಲಯಾಳಂ ತಿಂಗಳಿನ ಪ್ರಕಾರ ಒಂದನೇ ತಾರೀಕು ಆಗಿದೆ. ನಾವು ನಮ್ಮ ಮಕ್ಕಳಿಗೆ ಹೊಸ ಉಡುಗೆ ತೊಡಗೆಗಳನ್ನು ಕೊಡಿಸುವುದರ ಜೊತೆಗೆ ಉತ್ತಮ ಸಂಸ್ಕೃತಿಯನ್ನು ಕಲಿಸಬೇಕು. ಕುಟುಂಬದ ಸದಸ್ಯರೆಲ್ಲರೂ ಸೇರಿ ಸಂಭ್ರಮದಿಂದ ಹಬ್ಬವನ್ನು ಆಚರಿಸುವುದನ್ನು ಹೇಳಿಕೊಡಬೇಕು ಎಂದರು. ಸಂಘದ ಸ್ಥಾಪಕಾಧ್ಯಕ್ಷ ಕೆ.ಎಸ್.ರಮೇಶ್ ಅವರು ಮಾತನಾಡಿ ವಿಷು ಕಣಿ ಇಡುವುದು ನಮ್ಮ ಪೂರ್ವಜರ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ವಿಶಿಷ್ಟ ಸಂಪ್ರದಾಯವಾಗಿದೆ. ಮನೆಯಲ್ಲಿರುವ ಹಿರಿಯರು ಬೆಳಗ್ಗಿನ ಜಾವ ತೋಟದಲ್ಲಿ ಬೆಳೆಸಿದ ಹಣ್ಣುಹಂಪಲು, ತರಕಾರಿ ಹಾಗೂ ಚಿನ್ನಾಭರಣ, ಹಣದೊಂದಿಗೆ ಕಣಿ ಇಡುತ್ತಾರೆ. ಮಕ್ಕಳು, ಮೊಮ್ಮಕ್ಕಳನ್ನು ಕರೆ ತಂದು ಕಣಿಯನ್ನು ತೋರಿಸಿ ಶ್ರೀ ಕೃಷ್ಣನನನ್ನು ನಮಿಸುತ್ತಾರೆ. ಹೊಸ ವರ್ಷದಲ್ಲಿ ಇವುಗಳನ್ನು ನೋಡುವುದರಿಂದ ವರ್ಷಪೂರ್ತಿ ದವಸ ಧಾನ್ಯ, ಸಂಪತ್ತು ತುಂಬಿ ಬರುವುದು ಎನ್ನುವ ನಂಬಿಕೆ ಹಿಂದಿನ ಕಾಲದಿಂದಲೂ ಇದೆ. ಈ ಸಂಪ್ರದಾಯವನ್ನು ಯುವ ಸಮೂಹ ಮುಂದುವರೆಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು. ಸಂಘದ ಸಲಹೆಗಾರ ಹಾಗೂ ಉದ್ಯಮಿ ಪಿ.ಟಿ.ಉಣ್ಣಿಕೃಷ್ಣ, ಸಂಘಟನಾ ಕಾರ್ಯದರ್ಶಿ ಪ್ರಮೋದ್ ಟಿ.ಆರ್, ಖಜಾಂಚಿ ರವಿ ಎಂ.ಪಿ, ಮಹಿಳಾ ಘಟಕದ ಅಧ್ಯಕ್ಷರಾದ ಲತಾ ರಾಜನ್ ಹಾಗೂ ಅತಿಥಿ ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಿನೇಶ್ ನಾಯರ್ ಇ.ಬಿ ಹಾಗೂ ಸಂದೀಪ್ ಅವರು ವಿಷು ಕಣಿಯನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿದರು. ಶ್ರಾವ್ಯ ಸುಬ್ರಮಣಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಎಚ್.ಪಿ.ಅಶೋಕ್, ಸಹ ಖಜಾಂಚಿ ಸುಬ್ರಮಣಿ ಪಿ.ವಿ, ಪ್ರಚಾರ ಸಮಿತಿಯ ಅಧ್ಯಕ್ಷ ರವಿ ಅಪ್ಪುಕುಟ್ಟನ್ ಹಾಗೂ ಸರ್ವ ನಿರ್ದೇಶಕರುಗಳು ಉಪಸ್ಥಿತರಿದ್ದರು. 200ಕ್ಕೂ ಅಧಿಕ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.