






ಚೆಟ್ಟಳ್ಳಿ ಏ.16 NEWS DESK : ಶ್ರೀಮಂಗಲ-ಚೆಟ್ಟಳ್ಳಿ ಶ್ರೀ ಭಗವತಿ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಏ.14 ರಂದು ಪಟ್ಟಣಿ ಹಬ್ಬದ ಅಂಗವಾಗಿ ಅಂದು ಮೂಲ ನೆಲೆಯಲ್ಲಿ ಪೂಜೆಸಲ್ಲಿಸಲಾಯಿತು. ಮುಳ್ಳಂಡ ಐನ್ ಮನೆಯಿಂದ ತಕ್ಕರಾದ ಮುಳ್ಳಂಡ ಕರಣ್ ಕಾವೇರಪ್ಪ ದೇವರ ಭಂಡಾರವನ್ನು ಊರಿನವರ ಸಮ್ಮುಖದಲ್ಲಿ ದುಡಿಕೊಟ್ಟ್ ಹಾಗೂ ವಾಲಗ ಎತ್ತ್ ಪೋರಾಟದೊಂದಿಗೆ ದೇವಾಲಯಕ್ಕೆ ತರಲಾಯಿತು. ವಿಶೇಷ ಪೂಜೆಯ ನಂತರ ಪ್ರಸಾದ ವಿತರಣೆ ನೆರವೇರಿತು. ಮಳೆದೇವರೆಂದೇ ಹೆಸರುವಾಸಿಯಾದ ಭಗವತಿ ದೇವಿಯ ಉತ್ಸವದಂದು ಹೆಚ್ಚಾಗಿ ಮಳೆ ಸುರಿಯುವ ಮೂಲಕ ದೇವರ ಶಕ್ತಿಯನ್ನು ಪ್ರದರ್ಶನಕ್ಕೆ ಕಾರಣವಾಯಿತು. ಏ.15 ರ ದೊಡ್ಡ ಹಬ್ಬದಂದು ಮಧ್ಯಾಹ್ನ ದೇವ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ದೇವಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆಯನ್ನು ನೆರವೇರಿಸಲಾಯಿತು. ನಂತರ ಕೋವಿಗೆ ಪೂಜೆ ಸಲ್ಲಿಸಿ ತೆಂಗಿನ ಕಾಯಿಗೆ ಗುಂಡುಹೊಡೆಯುವ ಸ್ಪರ್ಧೆ ಹಾಗೂ ಚೌರಿಯಾಟ್ ನಡೆಯಿತು. ದೇವರ ಬೊಳಕ್ ಮರವನ್ನು ತೆಗೆದು ಗರ್ಭಗುಡಿಯಲ್ಲಿಡಲಾಯಿತು. ಪ್ರಸಾದ ವಿತರಣೆ ಹಾಗೂ ಅನ್ನದಾನ ನೆರವೇರಿತು.