






ಸೋಮವಾರಪೇಟೆ ಏ.16 NEWSDESK : ಪವಿತ್ರ ತಪೋವನ ಕ್ಷೇತ್ರ ಮನೆಹಳ್ಳಿ ಮಠ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು ಬೇಡಿಕೆ ಈಡೇರಿಸಿಕೊಳ್ಳುವ ಜತೆ ನಿಷ್ಠೆ ಮತ್ತು ಶ್ರದ್ಧೆ ಇರುವಂತದ್ದೇ ಪವಿತ್ರ ಕ್ಷೇತ್ರ ಎಂದು ತುಮಕೂರು ಸಿದ್ಧಗಂಗಾ ಮಠಾಧೀಶ ಶ್ರೀಸಿದ್ಧಲಿಂಗ ಮಹಾ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಅಂಕನಹಳ್ಳಿ ತಪೋವನ ಕ್ಷೇತ್ರದ ಧಾರ್ಮಿಕ ಹಾಗೂ ಗುರುವಂದನಾ ಸಮಾರಂಭದ ಸಾನಿಧ್ಯ ವಹಿಸಿದ್ದ ಅವರು ಆಶೀರ್ವಚನ ನೀಡಿದರು. ಭಾರತೀಯ ಸಂಸ್ಕೃತಿ ಆಧ್ಯಾತ್ಮ ಮತ್ತು ಸಾತ್ವಿಕತೆಯ ತಳಹದಿಯ ಮೇಲೆ ರೂಪಿತವಾಗಿದ್ದು;ಸಂಸ್ಕೃತಿಯಲ್ಲಿ ಋಷಿಮುನಿಗಳ ಪಾತ್ರ ಮುಖ್ಯವಾಗಿದೆ. ಭಾರತ ಧರ್ಮಕ್ಕೆ ಹೆಸರಿರುವಂತದ್ದು.ವಿಶ್ವಕ್ಕೆ ಶಾಂತಿ ಬಯಸುವ ದೇಶ.ವಸುದೈವಕ ಕುಟುಂಬಕಂ ಎಂಬುದು ಭಾರತಕ್ಕೆ ಅನ್ವಯಸುತ್ತದೆ.”ಭಾ” ಎಂದರೆ ಬೆಳಕು. “ರತ” ಎಂದರೆ ಬದುಕುವುದು.ಭಾರತ ಬೆಳಕಿನಲ್ಲಿ ಬದುಕುವಂತಹ, ಎಲ್ಲರ ಹಿತ ಬಯಸುವ ದೇಶ.ಧಾರ್ಮಿಕತೆ ಭಾರತದ ಹೆಸರಿನಲ್ಲಿದೆ.ಕರ್ನಾಟಕದ ಪ್ರಗತಿಗೆ ಮೈಸೂರು ರಾಜರು ಕೊಟ್ಟ ಕೊಡುಗೆ ಅನನ್ಯ.ಕೊಡಗಿನ ಪಾವಿತ್ರತೆ ಉಳಿಸುವ ಜವಾಬ್ದಾರಿ ಜನರಲ್ಲಿದೆ ಎಂದರು. ಸಮ್ಮುಖದಲ್ಲಿದ್ದ ಅರಮೇರಿ ಕಳಂಚೇರಿ ಮಠಾಧೀಶ ಶ್ರೀಶಾಂತಮಲ್ಲಿಕಾರ್ಜುನಸ್ವಾಮೀಜಿ ಆಶಯ ನುಡಿಗಳನ್ನಾಡಿ, ಇತಿಹಾಸವನ್ನು ಹುಟ್ಟುಹಾಕಿ ಮತ್ತೆ ಜೀವಂತಿಕೆ ಕೊಟ್ಟು 25 ವರ್ಷಗಳಲ್ಲಿ ಶ್ರದ್ಧಾ ಕೇಂದ್ರವಾಗಿ ಪರಿವರ್ತನೆ ಹೊಂದಿದ ಮನೆಹಳ್ಳಿಮಠದಲ್ಲಿ ಯಂತ್ರ-ತಂತ್ರ, ವಿಜ್ಞಾನ ಯುಗದಲ್ಲೂ ಆಧ್ಯಾತ್ಮಿಕತೆಯ ಅವಶ್ಯಕತೆ ಮನಗಂಡ ಮಹಾಂತಶಿವಲಿಂಗ ಸ್ವಾಮೀಜಿ ಭಕ್ತರ ಸಹಕಾರದಿಂದ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಶ್ಲಾಘಿಸಿದರು.
ಸಮಾರಂಭ ಉದ್ಘಾಟಿಸಿದ ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕೊಡಗು-ಮೈಸೂರು ಜಿಲ್ಲೆಗಳೆರಡು ಪವಿತ್ರ ಕ್ಷೇತ್ರವಾಗಿದ್ದು ಕೊಡಗಿನ ಪರಂಪರೆ ಅನನ್ಯವಾಗಿದೆ.ಸಮಾಜದಲ್ಲಿ ಧರ್ಮ-ಸಂಸ್ಕೃತಿ ಉಳಿಸುವಲ್ಲಿ ಮಠಗಳು ಉತ್ತಮ ಪಾತ್ರ ವಹಿಸುತ್ತವೆ.ಪುಣ್ಯಭೂಮಿ ಭಾರತದಲ್ಲಿ ಯತಿಮುನಿಗಳಿಂದ, ಪೂರ್ವಜರಿಂದ ಧರ್ಮ ಉಳಿದಿದೆ.ವಿಶ್ವ ಸಮುದಾಯದಲ್ಲಿ ಹಿಂದೂ ಧರ್ಮವನ್ನು ಕಾಪಾಡಿ, ಉಳಿಸಬೇಕು.ತಪೋವನ ಕ್ಷೇತ್ರದಲ್ಲಿ ಚಟುವಟಿಕೆಗಳು ಕ್ರಿಯಾಶೀಲವಾಗಿವೆ.ಪರಂಪರೆ, ಧರ್ಮ, ಸಂಸ್ಕೃತಿಯೊಂದಿಗೆ ದೇವಸ್ಥಾನ ಹಾಗೂ ಮಠಮಾನ್ಯಗಳ ಅಭಿವೃದ್ಧಿಯು ಯೋಜನೆಗಳ ಮೂಲಕ ಆಗಬೇಕು ಎಂದರು. ಬಸವೇಶ್ವರ ಹಾಗೂ ಶ್ರೀ ಶಿವಕುಮಾರ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಮನೆಹಳ್ಳಿಮಠ ಪವಿತ್ರ ಜಾಗವಾಗಿದ್ದು ತಪೋವನ ಕ್ಷೇತ್ರ ಜಿಲ್ಲೆಯ ಗಡಿಭಾಗದ ಭಕ್ತರಿಗೆ, ಜನರಿಗೆ ಆಶೀರ್ವಾದ ನೀಡಿದೆ.ಮನೆಹಳ್ಳಿ ಮಠದ ಅಭಿವೃದ್ಧಿಗಾಗಿ ರೂ.50 ಲಕ್ಷ ಅನುದಾನ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದರು. ವಿಶ್ವಕಪ್ ವಿಜೇತ ಭಾರತ ಖೊಖೊ ತಂಡದ ಆಟಗಾರ್ತಿ ಕೊಡಗಿನ ಚೈತ್ರಾ ಅವರಿಗೆ ಆರ್ಥಿಕ ಸಹಾಯ ಮಾಡುವಂತೆ ಕಾರ್ಯಕ್ರಮ ಆಯೋಜಕ ಎಸ್.ಮಹೇಶ್ ಮಾಡಿದ ಮನವಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಶಾಸಕ ಡಾ.ಮಂತರ್ ಗೌದ ಸ್ಪಂದಿಸಿ, ರಾಜ್ಯ-ಕೇಂದ್ರ ಸರ್ಕಾರದಲ್ಲಿ ಲಭ್ಯವಿರುವ ಸಹಾಯ, ಸಹಕಾರದ ಜತೆ ವೈಯಕ್ತಿಕ ಸಹಕಾರ ನೀಡುವ ಭರವಸೆ ನೀಡಿದರು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯೆ ಭಾರತಿಶೆಟ್ಟಿ, ಶಾಸಕ ಸಿಮೆಂಟ್ ಮಂಜು ಹಾಗೂ ಶನಿವಾರಸಂತೆ ಪೊಲೀಸ್ ಠಾಣೆ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಡಾ.ಬೆನಕ ಪ್ರಸಾದ್ ಮಾತನಾಡಿದರು. ಸಾಧಕರಾದ ನಿವೃತ್ತ ನ್ಯಾಯಾಧೀಶ ಎಂ.ಆರ್.ದೇವಪ್ಪ, ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ವಿರುಪಾಕ್ಷಯ್ಯ, ವಿಶ್ವಕಪ್ ವಿಜೇತ ಖೊ-ಖೊ ತಂಡದ ಆಟಗಾರ್ತಿ ಚೈತ್ರಾ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಕಿ ಆಟಗಾರ ವಿಕ್ರಾಂತ್, ಏಷಿಯ ಕಪ್ ವಿಜೇತ ಹಾಕಿ ತಂಡದ ತರಬೇತುದಾರ ಸಿ.ಬಿ.ಜನಾರ್ಧನ್, ಭರತನಾಟ್ಯ ಕಲಾವಿದೆ ಮಿಲನಾ, ಪ್ರಗತಿಪರ ಕೃಷಿಕ ಡಿ.ಬಿ.ಧರ್ಮಪ್ಪ, ಸಾಹಿತಿ ಉಳುವಂಗಡ ಕಾವೇರಿ ಉದಯ್, ಜಿ.ಪಂ.ಮಾಜಿ ಅಧ್ಯಕ್ಷೆ ಜಯಮ್ಮ ಮತ್ತಿತರ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ನ್ಯಾಯಾಧೀಶ ಎಂ.ಆರ್.ದೇವಪ್ಪನವರು ಖೊ-ಖೊ ತಂಡದ ಆಟಗಾರ್ತಿ ಚೈತ್ರಾ ರಿಗೆ ವೇದಿಕೆಯಲ್ಲೇ ರೂ.5 ಸಾವಿರ ಕೊಡುಗೆ ನೀಡಿದರು. ಶ್ರೀಕ್ಷೇತ್ರಧ್ಯಕ್ಷ ಮಹಾಂತ ಶಿವಲಿಂಗ ಸ್ವಾಮೀಜಿ ಮನೆಹಳ್ಳಿಮಠದ ಪರಿಚಯ ಮಾಡಿಕೊಟ್ಟು ಅತಿಥಿಗಣ್ಯರನ್ನು ಸ್ವಾಗತಿಸಿದರು.ಕಿರಿಕೊಡ್ಲಿಮಠದ ಸದಾಶಿವಸ್ವಾಮೀಜಿ ನೇತೃತ್ವದಲ್ಲಿ ಕಲ್ಲುಮಠದ ಮಹಾಂತಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಶಿವಾಚಾರ್ಯಸ್ವಾಮೀಜಿ, ಕಲ್ಲಳ್ಳಿಮಠದ ರುದ್ರಮುನಿಸ್ವಾಮೀಜಿ, ಹಾಸನ ಆದಿಚುಂಚನಗಿರಿಮಠದ ಶಂಭುನಾಥ ಸ್ವಾಮೀಜಿ, ಇತರ ಮಠಾಧೀಶರು, ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ, ಬೇಲೂರು ಶಾಸಕ ಸುರೇಶ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶಿವಪ್ಪ, ತಹಶಿಲ್ದಾರ್ ಕೃಷ್ಣಮೂರ್ತಿ, ಪ್ರಮುಖರಾದ ಜಿ.ಎಂ.ಕಾಂತರಾಜ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ, ಹಾಲಪ್ಪ, ಶಾರದಮ್ಮ, ಜಯಶ್ರೀ, ದೇವರಾಜಮ್ಮ, ಪದ್ದಕ್ಕ, ಟ್ರಸ್ಟ್ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಅಧ್ಯಕ್ಷೆ ಡಿ.ಸುಜಲಾದೇವಿ ಹಾಗೂ ಕಾರ್ಯಕ್ರಮ ಆಯೋಜಕ ಎಸ್.ಮಹೇಶ್ ಕಾರ್ಯಕ್ರಮ ನಿರೂಪಿಸಿ, ನಿರ್ವಹಿಸಿದರು.ವಿವಿಧ ಶಾಲಾ ವಿದ್ಯಾರ್ಥಿನಿಯರು ನೃತ್ಯ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು.