
ನಾಪೋಕ್ಲು ಏ.18 NEWS DESK : ಕೈಕಾಡು ಗ್ರಾಮದ ಮಕ್ಕೋಟು ಮಹಾಲಕ್ಷ್ಮಿ ದೇವರ ವಾರ್ಷಿಕ ಉತ್ಸವವು ಶ್ರದ್ಧಭಕ್ತಿಯಿಂದ ನಡೆಯಿತು. ಎರಡು ವರ್ಷಕೊಮ್ಮೆ ನಡೆಯುವ ಹಬ್ಬದಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾತ್ರಿ ಹದಿನೆಂಟು ತರಹದ ದೇವರ ಕುಣಿತವನ್ನು ದೇವರ ಹೆಸರನ್ನು ಹೇಳುತ್ತಾ ಕೈಕಾಡು ಗ್ರಾಮದ, ಮಕ್ಕೋಟು ಕೇರಿಯ ವಿವಿಧ ಕುಟುಂಬದ 18 ವರ್ಷ ಮೇಲ್ಪಟ್ಟ ಸದಸ್ಯರು ಕುಣಿದರು. ಬಳಿಕ ಆ ನೃತ್ಯಗಳನ್ನು ಮಂಗಳವಾರ ದೇವಾಲಯದಲ್ಲಿ ಪ್ರದರ್ಶಿಸಲಾಯಿತು. ಮಂಗಳವಾರ ಬೆಳಿಗ್ಗೆ ದೇವತಕ್ಕರಾದ ಚೊಟ್ಟೆಯಂಡ, ಭಂಡಾರ ತಕ್ಕರ ನೆರೆಯಂಡಮ್ಮಂಡ ಕುಟುಂಬದಿಂದ ಹಾಗೂ ಪಾಡೆಯಂಡ, ಬಟ್ಟಿಯಂಡ, ಕದ್ದಣಿಯಂಡ, ನಾಯಕಂಡ ಆರು ಕುಟುಂಬದವರು ಎತ್ತುಪೊರಾಟದೊಂದಿಗೆ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರವೇಶವಾಗಿ ಬಳಿಕ ಸಾಂಪ್ರದಾಯಕವಾಗಿ ದೇವರ ವಿವಿಧ ಬಗೆಯ ಕುಣಿತಗಳನ್ನು ಒಂದೊಂದಾಗಿ ಕುಣಿಯುತ್ತಾ ಸಂಪನ್ನಗೊಂಡಿತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಸಲ್ಪಡುವ ಹಬ್ಬ ಇದಾಗಿದೆ. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ತಕ್ಕ ಮುಖ್ಯಸ್ಥರು ಸೇರಿದಂತೆ ಊರ ಮತ್ತು ಪರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ : ದುಗ್ಗಳ ಸದಾನಂದ.









