
ಮಡಿಕೇರಿ ಏ.19 NEWS DESK : ಮಡಿಕೇರಿ ನಗರಸಭೆಗೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ಹಲವು ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಮಹಿಳಾ ಬಿಜೆಪಿ ಜಿಲ್ಲಾಧ್ಯಕ್ಷೆ ಹಾಗೂ ನಗರಸಭೆಯ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುದಾನ ತಂದಿರುವ ಸಂಸದ ಯದುವೀರ್ ಒಡೆಯರ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಪ್ರಯತ್ನ ಅಭಿನಂದನಾರ್ಹ, ಮುಂದಿನ ದಿನಗಳಲ್ಲಿಯೂ ಕೇಂದ್ರದಿಂದ ಮತ್ತಷ್ಟು ಅನುದಾನ ಬರಲಿದೆ ಎಂದರು. ಸ್ವಚ್ಛ ಭಾರತ ಮಿಷನ್ 1 (ಭಾಗ 1) 6.69 ಕೋಟಿ ಬಿಡುಗಡೆಯಾಗಿದ್ದು, ಇದರಲ್ಲಿ ಮಡಿಕೇರಿ ಸಭೆಯ ಪಾರಂಪರಿಕ ತ್ಯಾಜ್ಯವನ್ನು ವಿಲೇವಾರಿ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಇದರ ಕಾಮಗಾರಿ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಸ್ವಚ್ಚ ಭಾರತ ಮಿಷನ್ 1 (ಭಾಗ 2)ರಲ್ಲಿ 5.71 ಕೋಟಿ ನಿರ್ವಹಣೆಗೆ ಅನುದಾನ ಇರಿಸಲಾಗಿದೆ. ಈಗಾಗಲೇ ಇದರಲ್ಲಿ 4.98 ಕೋಟಿ ಘನ ತ್ಯಾಜ್ಯ ಕಾಮಗಾರಿಗಳ ಟೆಂಡರ್ ಕರೆಯಲಾಗಿದೆ ಮತ್ತು ಮಡಿಕೇರಿ ನಗರಸಭೆಗೆ ಟ್ರಾಕ್ಟರ್ ಹಾಗೂ ಟಿಪ್ಪರ್‍ಗಳನ್ನು ತರಲಾಗಿದೆ ಎಂದು ತಿಳಿಸಿದರು. ಸ್ವಚ್ಛ ಭಾರತ ಮಿಷನ್‍ನ 2 ರಲ್ಲಿ 103.69 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಮುಂದಿನ ದಿನಗಳಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಬೇಕಾದಂತಹ ಶೆಡ್ ಹಾಗೂ ಯಂತ್ರೋಪಕರಣಗಳನ್ನು ಖರೀದಿಸಲು ಅನುದಾನವನ್ನು ಮೀಸಲಿಡಲಾಗಿದೆ ಎಂದು ಹೇಳಿದರು. ಮಿಲೇನಿಯಮ್ ಪ್ಲಸ್ ಸಿಟಿ (MCP)ಯಿಂದ ನಾನ್ ಮಿಲೇನಿಯಮ್ ಪ್ರಸ್ ಸಿಟಿ (NMPC)59 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಮಡಿಕೇರಿ ನಗರ ಸಭೆಗೆ ಈಗಾಗಲೇ ಸಕ್ಕಿಂಗ್ ಮಿಷನ್ ಮತ್ತು ನಗರದಲ್ಲಿ ಬೋರ್‍ವೆಲ್ ಕಾಮಗಾರಿ ಮತ್ತು ಪೈಪ್ ಲೈನ್ ಕಾಮಗಾರಿಗಳನ್ನು ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ರೆಸ್ಪಾನ್ಸ್ ಪೋರ್ಸ್ (NDRF) 30ಲಕ್ಷ ಅನುದಾನದಲ್ಲಿ ಈಗಾಗಲೇ ಮಡಿಕೇರಿ ನಗರಸಭೆಯ ರಸ್ತೆಗಳನ್ನು ಗುಂಡಿಮುಚ್ಚವ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದರು. ಕೇಂದ್ರ ಸರ್ಕಾರದಿಂದ ಅಮೃತ್ 2.0 ಯೋಜನೆಯಡಿ ಕುಡಿಯುವ ನೀರಿಗೆ ಒಟ್ಟು 47.41 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಪೈಪ್‍ಲೈನ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ನಗರಸಭಾ ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ, ಸುಮಾರು 45 ವರ್ಷಗಳಷ್ಟು ಹಳೆಯದಾದ ಪೈಪ್ ಲೈನ್‍ಗಳಿಂದ ಹಲವೆಡೆ ನೀರು ಸೋರಿಕೆಯಾಗಿ ಮನೆಗಳಿಗೆ ಸಮರ್ಪಕವಾಗಿ ನೀರು ದೊರಕುತ್ತಿಲ್ಲ. ಆದ್ದರಿಂದ ನೂತನ ಪೈಪ್‍ಗಳನ್ನು ಅಳವಡಿಸಲಾಗುತ್ತಿದ್ದು, ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ನಗರ ಬಿಜೆಪಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಉಮೇಶ್ ಸುಬ್ರಮಣಿ ಮಾತನಾಡಿ ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಬಿಜೆಪಿ ಸಮರ್ಥವಾಗಿ ಆಡಳಿತ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಸವಿತಾ ರಾಕೇಶ್, ಮಹೇಶ್ ಜೈನಿ ಹಾಗೂ ಕೆ.ಎಂ.ಅಪ್ಪಣ್ಣ ಉಪಸ್ಥಿತರಿದ್ದರು.









