
ಮಡಿಕೇರಿ ಏ.20 NEWS DESK : ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಕೇರಳದ ಶ್ರೀ ಈಶ್ವರ ನಂಬೂದರಿ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು. ಏ.18ರಂದು ಸಂಜೆ ಆಚಾರ್ಯರ ಆಗಮನ ಪುಣ್ಯಾಹ ಶುದ್ಧಿ, ದೇವಿ ಪೂಜೆ, ಸುದರ್ಶನ ಹೋಮ ಮತ್ತು ಪ್ರಸಾದ ವಿತರಣೆ ನಡೆಯಿತು. ಮರುದಿನ ಶ್ರೀ ಮಹಾ ಗಣಪತಿ ಹೋಮ, ಐಕ್ಯಮತ್ಯ ಸುಕ್ರದ ಹೋಮ, ಕಳಸ ಪೂಜೆ, ದೇವಿಗೆ ಅಭಿಷೇಕ, ಅಲಂಕಾರ ಪೂಜೆ ಮತ್ತು ಮಹಾ ಮಂಗಳಾರತಿ ನೆರವೇರಿತು. ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ನಗರದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯ ಸಮಿತಿ ವತಿಯಿಂದ ಶ್ರೀ ಕಂಚಿ ಕಾಮಾಕ್ಷಿಯಮ್ಮ ಹಾಗೂ ಶ್ರೀ ಮುತ್ತು ಮಾರಿಯಮ್ಮ ದೇವಿಯ ಮೂಲ ವಿಗ್ರಹಗಳಿಗೆ ಸ್ವರ್ಣ ಕಾಸಿನ ಮಾಲೆಯನ್ನು ಸಮರ್ಪಿಸಲಾಯಿತು.












