
ಮಡಿಕೇರಿ ಏ.24 NEWS DESK : ಚಿಕ್ಕ ಅಳುವಾರದ ಕೊಡಗು ವಿವಿಯ ಜ್ಞಾನ ಕಾವೇರಿ ಆವರಣದಲ್ಲಿ ಏ.28 ರಂದು ‘ಸಮಗ್ರ-ಸಮತೆಯೆಡೆಗೆ ಸಾಹಿತ್ಯ’ ವಿಷಯದ ಮೇಲೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ ಎಂದು ಅಹಿಂದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದರು. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ದಲಿತ ಸಾಹಿತ್ಯ ಪರಿಷತ್ತು, ಕೊಡಗು ವಿಶ್ವ ವಿದ್ಯಾನಿಲಯ, ಮಾನವ ಬಂಧುತ್ವ ವೇದಿಕೆ, ಸಹಮತ ವೇದಿಕೆ ಮತ್ತು ಅಹಿಂದ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್‍ರವರ 134ನೇ ಜನ್ಮದಿನದ ಅಂಗವಾಗಿ ವಿಚಾರ ಸಂಕಿರಣವನ್ನು ನಡೆಸುತ್ತಿರುವುದಾಗಿ ತಿಳಿಸಿದರು. ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅಂದು ಬೆಳಗ್ಗೆ 10 ಗಂಟೆಗೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ವಿವಿ ಕುಲಪತಿಗಳಾದ ಡಾ. ಅಶೋಕ ಸಂಗಪ್ಪ ಆಲೂರ ವಹಿಸಲಿದ್ದಾರೆ. ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಕೊಡಗು ವಿವಿ ಕುಲ ಸಚಿವರಾದ ಡಾ.ಸುರೇಶ್ ಎಂ.ಅವರ ಘನ ಉಪಸ್ಥಿತಿ ಇರಲಿದೆ ಎಂದು ತಿಳಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬೆಳಗ್ಗೆ 11 ಗಂಟೆಗೆ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರಾದ ಡಾ.ಎ.ಬಿ. ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ‘ಸಮಗ್ರ-ಸಮತೆಯೆಡೆಗೆ ಸಾಹಿತ್ಯ’ ವಿಷಯದ ಕುರಿತ ವಿಚಾರ ಸಂಕಿರಣ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್.ಮುಕುಂದ ರಾಜ್ ಪಾಲ್ಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉಪಸ್ಥಿತರಿರಲಿದ್ದಾರೆ ಎಂದರು. ಮಧ್ಯಾಹ್ನ 12.30 ಗಂಟೆಗೆ ಚಾಮರಾಜನಗರ ವಿಶ್ವ ವಿದ್ಯಾಲಯದ ಕುಲ ಸಚಿವರಾದ ಡಾ.ಎ.ಆರ್.ಗಂಗಾಧರ ಅಧ್ಯಕ್ಷತೆಯಲ್ಲಿ ‘ಕೊಡಗಿನಲ್ಲಿ ಅಹಿಂದ ಒಕ್ಕೂಟದ ನೆಲೆಗಟ್ಟುಗಳು’ ವಿಷಯದ ಕುರಿತು ಎರಡನೇ ವಿಚಾರ ಸಂಕಿರಣ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿರುವ ಕೊಡಗು ಅಹಿಂದ ಒಕ್ಕೂಟದ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ವಿಷಯ ಮಂಡಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಸಮಾರೋಪ ಸಮಾರಂಭ ಮಧ್ಯಾಹ್ನ 1.30 ಗಂಟೆಗೆ ಕೊಡಗು ವಿವಿ ಕುಲಪತಿಗಳಾದ ಡಾ.ಅಶೋಕ ಸಂಗಪ್ಪ ಆಲೂರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ಯದುವೀರ್ ಒಡೆಯರ್ ಪಾಲ್ಗೊಳ್ಳಲಿದ್ದು, ಸಮಾರೋಪ ಭಾಷಣವನ್ನು ಸಾಮಾಜಿಕ ಚಿಂತಕರಾದ ವಿ.ಪಿ.ಶಶಿಧರ್ ಮಾಡಲಿದ್ದಾರೆ. ಚಾಮರಾಜನಗರ ವಿವಿ ಕುಲಪತಿಗಳಾದ ಡಾ.ಎಂ.ಆರ್.ಗಂಗಾಧರ, ವಿರಾಜಪೇಟೆ ತಾಲ್ಲೂಕು ಕಸಾಪ ಅಧ್ಯಕ್ಷರಾದ ರಾಜೇಶ್ ಪದ್ಮನಾಭ, ದಲಿತ ಮುಖಂಡರಾದ ಜಯಪ್ಪ ಹಾನಗಲ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಹಿಂದ ಜಿಲ್ಲಾಧ್ಯಕ್ಷ ಟಿ.ಎಂ.ಮುದ್ದಯ್ಯ, ಕಾರ್ಯಧ್ಯಕ್ಷ ಕೆ.ಟಿ.ಬೇಬಿಮ್ಯಾಥ್ಯು ಮತ್ತು ವಿರಾಜಪೇಟೆ ತಾಲ್ಲೂಕು ಸಂಘಟಕ ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.









