
ವಿರಾಜಪೇಟೆ ಏ.25 NEWS DESK : ವಿರಾಜಪೇಟೆಯ ಭರತನಾಟ್ಯ ಕಲಾವಿದೆ ಬಿ.ಎನ್.ಲಾವಣ್ಯ ಬೋರ್ಕರ್ ಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಸದ್ಭಾವನಾ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ. ಬಿ.ಎನ್.ಲಾವಣ್ಯ ಭರತನಾಟ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ (ರಿ )ಸಂಸ್ಥೆಯ ವತಿಯಿಂದ ಮೈಸೂರಿನ ಸಾಹಸಸಿಂಹ ಸಭಾಂಗಣ ಡಾ.ವಿಷ್ಣು ವರ್ಧನ್ ಸ್ಮಾರಕ ಭವನದಲ್ಲಿ ನಡೆದ ವಿವಿಧ ಸಾಧಕರುಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಉದ್ಯಮಿಗಳಾದ ಮೊಯಿದ್ದೀನ್, ಸಾಧಿಕ್, ಲೇಖಕ ಕೆಂಚನೂರ ಶಂಕರ, ನವೀನ್ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು. ಲಾವಣ್ಯ ಬೋರ್ಕರ್ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ನ ಗುರುಗಳಾದ ವಿದೂಷಿ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆ ಹಾಗೂ ಬೇಟೋಳಿ ರಾಮನಗರದ ನಾಟಿ ವೈದ್ಯರು ಹಾಗೂ ಕಾಫಿ ಬೆಳೆಗಾರರಾದ ಬಿ.ಜಿ.ನಟರಾಜ್ ಬೋರ್ಕರ್ ಹಾಗೂ ಸುನಂದ ದಂಪತಿಗಳ ಪುತ್ರಿ. ಲಾವಣ್ಯ ಪ್ರಸ್ತುತ ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಅಂತಿಮ ಬಿಬಿಎ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.









