
ಮಡಿಕೇರಿ NEWS DESK ಏ.25 : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿರುವ ದಾಳಿ ಅಮಾನವೀಯವಾಗಿದ್ದು, ಭಯೋತ್ಪಾದಕರನ್ನು ಸದೆಬಡಿಯಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಾತ್ಯತೀತ ಜನತಾದಳದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ರವಿಕಿರಣ್ ಶೆಟ್ಟಿ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿ ಖಂಡನೀಯ, ಅಮಾಯಕ ಪ್ರವಾಸಿಗರ ಸಾವಿಗೆ ಜೆಡಿಎಸ್ ಸಂತಾಪ ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಭಾರತವನ್ನು ಭಯೋತ್ಪಾದಕ ಮುಕ್ತ ದೇಶವನ್ನಾಗಿ ಮಾಡಲು ಅಗತ್ಯವಿರುವ ಕಠಿಣ ಕಾನೂನು ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕು. ಅಮಾಯಕ ನಾಗರೀಕರ ಹಾಗೂ ಯೋಧರ ಹತ್ಯೆಯಾಗುವುದನ್ನು ತಪ್ಪಿಸಬೇಕು. ಇನ್ನು ಮುಂದೆ ಭದ್ರತಾ ವ್ಯವಸ್ಥೆ ವೈಫಲ್ಯವಾಗದಂತೆ ಮತ್ತು ಗುಪ್ತಚರ ಇಲಾಖೆ ಸಕ್ರಿಯವಾಗುವಂತೆ ಕ್ರಮ ಕೈಗೊಳ್ಳಬೇಕು. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಮಾಡುವುದು ಅಧರ್ಮದ ಕಾರ್ಯವಾಗಿದ್ದು, ದೇಶದ್ರೋಹಿಗಳಿಗೆ ಯಾರೂ ಬೆಂಬಲ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ದೇಶದ ಭದ್ರತೆಗಾಗಿ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕು ಮತ್ತು ಉಗ್ರರ ನಿಗ್ರಹಕ್ಕೆ ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಬೆಂಬಲ ಸೂಚಿಸಬೇಕು ಎಂದು ರವಿಕಿರಣ್ ಶೆಟ್ಟಿ ತಿಳಿಸಿದ್ದಾರೆ.








