
ಮಡಿಕೇರಿ NEWS DESK ಏ.28 : ಮಡಿಕೇರಿ ನಗರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಕಲಾವತಿ ಪಿ. ಹಾಗೂ ಉಪಾಧ್ಯಕ್ಷರಾಗಿ ಮಹೇಶ್ ಜೈನಿ ಅವರು ಆಯ್ಕೆಯಾಗಿದ್ದಾರೆ. ಸುದೀರ್ಘ ಅವಧಿಯಿಂದ ಖಾಲಿ ಇದ್ದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ ಭರ್ತಿಯಾಗುವ ಮೂಲಕ ಮತ್ತೆ ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಆರಂಭಗೊಂಡಿದೆ. ಕಳೆದ ಎರಡು ವರ್ಷಗಳಿಂದ ನಗರಸಭೆಯಲ್ಲಿ ತಲೆದೋರಿದ್ದ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಗೊಂದಲ ಬಗೆಹರಿದ ಬೆನ್ನಲ್ಲೆ, ಇಂದು ಚುನಾವಣಾಧಿಕಾರಿಗಳಾದ ಉಪ ವಿಭಾಗಾಧಿಕಾರಿ ವಿನಾಯಕ್ ನರ್ವಾಡೆ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕಿಯೆ ನಡೆಯಿತು. ನಾಮಪತ್ರ ಸಲ್ಲಿಕೆ, ಪರಿಶೀಲನೆ, ಉಮೇದುವಾರಿಕೆ ಹಿಂದಕ್ಕೆ ಪಡೆಯುವ ಪ್ರಕ್ರಿಯೆಗಳು ಮುಗಿದ ಬಳಿಕ ಮಧ್ಯಾಹ್ನ 3 ಗಂಟೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕಿಯೆ ಕೈ ಎತ್ತುವ ಮೂಲಕ ನಡೆಯಿತು. ಅಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿಯ ಕಲಾವತಿ ಅವರು ನಗರಸಭೆೆಯಲ್ಲಿರುವ 16 ಬಿಜೆಪಿ ಸದಸ್ಯರು ಹಾಗೂ ಸಂಸದ ಯದುವೀರ್ ಒಡೆಯರ್ ಅವರ ಮತ ಸೇರಿದಂತೆ ಒಟ್ಟು 17 ಮತಗಳನ್ನು ಪಡೆದರು. ಇಷ್ಟೇ ಸಂಖ್ಯೆಯ ಮತಗಳನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ ಮಹೇಶ್ ಜೈನಿ ಪಡೆದರು. ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದ್ದ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ)ದ ನಗರಸಭಾ ಸದಸ್ಯೆ ಮೇರಿ ವೇಗಸ್, ತಮ್ಮನ್ನು ಒಳಗೊಂಡಂತೆ ನಗರಸಭೆಯ ಎಸ್‌ಡಿಪಿಐನ ಐವರು ಸದಸ್ಯರ ಮತಗಳನ್ನು ಪಡೆದುಕೊಂಡರು. ಇಷ್ಟೇ ಸಂಖ್ಯೆಯ ಮತಗಳನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಷೀರ್ ಅಹಮ್ಮದ್ ಪಡೆದರು. ಮಡಿಕೇರಿ ನಗರಸಭೆÉ ಒಟ್ಟು 23 ಸದಸ್ಯ ಸ್ಥಾನಗಳನ್ನು ಹೊಂದಿದ್ದು, ಇದರಲ್ಲಿ 16 ಬಿಜೆಪಿ, 5 ಎಸ್‌ಡಿಪಿಐ, ತಲಾ 1 ಸ್ಥಾನ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಿವೆ. ಇಂದಿನ ಚುನಾವಣಾ ಪ್ರಕ್ರಿಕೆಯಯಲ್ಲಿ ಕಾಂಗ್ರೆಸ್‌ನ ನಗರಸಭಾ ಸದಸ್ಯ ಬಿ.ವೈ.ರಾಜೇಶ್, ಜೆಡಿಎಸ್ ನ ಮುಸ್ತಫ ಅವರು ಪಾಲ್ಗೊಂಡಿದ್ದರು. ಆದರೆ ಇವರು ಯಾರ ಪರವಾಗಿಯೂ ಮತದಾನ ಮಾಡದೆ ತಟಸ್ಥರಾಗಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ನಗರಸಭಾ ಪೌರಾಯುಕ್ತ ರಮೇಶ್ ಪಾಲ್ಗೊಂಡಿದ್ದರು.










