
ಮಡಿಕೇರಿ ಏ.30 NEWS DESK : ವಕೀಲರು ಸಮಾಜದ ಆತ್ಮಸಾಕ್ಷಿಯ ಪಾಲಕರು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಬೆಂಗಳೂರು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ದಿನಾಚರಣೆ ಹಾಗೂ ಅಭಿನಂದನ ಸಮಾರಂಭದಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದಾರೆ. ನ್ಯಾಯಾಲಯ, ವಕೀಲರ ವಿಚಾರಕ್ಕೆ ಬಂದಾಗ ರಕ್ಷಣೆಗೆ ನಿಂತವರು ನಮ್ಮ ಮುಖ್ಯಮಂತ್ರಿಗಳು ಎಂದು ಹೇಳಿದರು. ವೃತ್ತಿಗೆ ಬಂದಾಗ, ಖಚಿತವಾಗಿ ಹಾಗೂ ಪಕ್ಷಾತೀತವಾಗಿ ವಕೀಲರು ನೈಜವಾಗಿ, ಸ್ವತಂತ್ರವಾಗಿ ನಡೆದುಕೊಳ್ಳಬೇಕು. ನ್ಯಾಯಾಂಗದ ಸ್ವಾಯತ್ತತೆಯಲ್ಲಿ ವಕೀಲರ ಪಾತ್ರ ಬಹುಮುಖ್ಯವಾದುದು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, ಸ್ವತಃ ವಕೀಲರೂ ಆಗಿದ್ದ ನಮ್ಮ ತಂದೆ, 18 ತಿಂಗಳ ಸೆರೆಮನೆ ವಾಸದಲ್ಲಿ ಇದ್ದರೂ ಸಹ ಪತ್ರಗಳನ್ನು ಮುಖ್ಯ ನ್ಯಾಯಾಧೀಶರಿಗೆ ಬರೆದು ನ್ಯಾಯ ಸಲ್ಲಿಸುವ ಕೆಲಸ ಮಾಡಿದ್ದಾರೆ. ನೀತಿಗಳು ಜನ ವಿರೋಧಿಯಾದಾಗ, ಸಂವಿಧಾನ ವಿರೋಧಿ ಆದಾಗ, ರಾಜಕೀಯ ಪ್ರೇರಿತವಾದಾಗ, ನ್ಯಾಯಮೂರ್ತಿಗಳು ಮಧ್ಯಪ್ರವೇಶ ಮಾಡಲೇಬೇಕು ಎಂದರು. ಇಲ್ಲವಾದರೆ ವಕೀಲರು ಧ್ವನಿ ಎತ್ತಬೇಕು. ಆಗ ಮಾತ್ರ ನ್ಯಾಯಾಂಗ, ನ್ಯಾಯ ವಿತರಣೆ ವ್ಯವಸ್ಥೆ ಉಳಿಸಲು ಸಾಧ್ಯವಾಗುತ್ತದೆ, ಸಂವಿಧಾನ ಉಳಿಸಲು ಹಾಗೂ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ದೇಶ ನಾಶವಾಗುತ್ತದೆ ಎಂದ ಅವರು, ಮುಖ್ಯಮಂತ್ರಿಗಳು ಹಾಗೂ ಸನ್ಮಾನಿಸಿದ ವಕೀಲರ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.









