
ಮಡಿಕೇರಿ ಏ.30 NEWS DESK : ಮಡಿಕೇರಿಯ ವಾಂಡರರ್ಸ್ ಸ್ಟೋರ್ಟ್ಸ್ ಕ್ಲಬ್ ವತಿಯಿಂದ ದಿ. ಸಿ.ವಿ. ಶಂಕರ್ ಸ್ವಾಮಿ ಸ್ಮರಣಾರ್ಥ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 31ನೇ ವರ್ಷದ ಉಚಿತ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳಿಗೆ ಹಾಕಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯಿ) ಟರ್ಫ್ ಮೈದಾನದಲ್ಲಿ ಪಂದ್ಯಾವಳಿ ನಡೆಯಿತು. ಶಿಬಿರಾರ್ಥಿಗಳ ಪೈಕಿ ಬಾಲಕರ ವಿಭಾಗದಲ್ಲಿ ಸೀನಿಯರ್, ಜೂನಿಯರ್, ಸಬ್ ಜೂನಿಯರ್ ಹಾಗೂ ಬಾಲಕಿಯರ ವಿಭಾಗದಲ್ಲಿ ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಾನ್ನಾಗಿ ಮಾಡಿ ಆಡಿಸಲಾಯಿತು. ವಿಜೇತ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಗೆ ಮೇ 1 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು. ಇದರೊಂದಿಗೆ ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಕೂಡ ನಡೆಸಲಾಗಿದ್ದು, ವಿಜೇತರಿಗೆ ಬಹುಮಾನಗಳೊಂದಿಗೆ ಭಾಗವಹಿಸಿದ ಎಲ್ಲರಿಗೂ ಪ್ರಶಂಸನಾ ಪತ್ರ ಕೂಡ ನೀಡಲಾಗುವುದು. ಇಂದಿನ ಪಂದ್ಯಾವಳಿ ಸಂದರ್ಭ ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರುಗಳಾದ ಬೊಪ್ಪಂಡ ಶ್ಯಾಂ ಪೂಣಚ್ಚ, ಕುಡೆಕಲ್ ಸಂತೋಷ್, ಗಣೇಶ್, ಕೇನೇರ ಕಾವ್ಯ, ನಾಟೋಳಂಡ ಸುರೇಶ್, ಬಿದ್ದಂಡ ನರೇನ್, ಕೋಟೇರ ನಾಣಯ್ಯ ಪಾಲ್ಗೊಂಡು ಪಂದ್ಯಾವಳಿ ನಡೆಸಿಕೊಟ್ಟರು. ಮಕ್ಕಳಿಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮೇ 1 ರಂದು ಸಮಾರೋಪ :: ಕಳೆದ ಒಂದು ತಿಂಗಳಿನಿಂದ ನಡೆದ ಶಿಬಿರದ ಸಮಾರೋಪ ಸಮಾರಂಭ ಮೇ 1 ರಂದು ಬೆಳಿಗ್ಗೆ 8.30ಗಂಟೆಗೆ ನಡೆಯಲಿದೆ. ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ವಾಂಡರ‍್ಸ್ ಸ್ಟೋರ್ಟ್ಸ್ ಕ್ಲಬ್ ಅಧ್ಯಕ್ಷ ಕೋಟೇರ ಎನ್. ಮುದ್ದಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್ ಭಾಗವಹಿಸಲಿದ್ದಾರೆ ಎಂದು ಶಿಬಿರದ ಸಂಚಾಲಕ ಬಾಬು ಸೋಮಯ್ಯ ತಿಳಿಸಿದ್ದಾರೆ.









