
ಮಡಿಕೇರಿ ಮೇ 1 NEWS DESK : ಕೊಡಗು ಜಿಲ್ಲಾ ಬುಡಕಟ್ಟು ಕಾರ್ಮಿಕರ ಸಂಘ ಹಾಗೂ ಗೋಣಿಕೊಪ್ಪ ಕಾಫಿ ತೋಟಗಳ ಕಾರ್ಮಿಕರ ಯೂನಿಯನ್ ಸಹಯೋಗದಲ್ಲಿ ಗೋಣಿಕೊಪ್ಪಲಿನಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು. ಗೋಣಿಕೊಪ್ಪಲುವಿನ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾರ್ಮಿಕರೇ ದೇಶದ ಶಕ್ತಿ. ಒಂದು ದೇಶವು ಯಶಸ್ಸು ಸಾಧಿಸಬೇಕೆಂದರೆ ಅದರಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ನಮ್ಮ ಸರಕಾರ ಕಾರ್ಮಿಕರ ಏಳಿಗೆಗೆ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಸದುಪಯೋಗವನ್ನು ಎಲ್ಲಾ ಕಾರ್ಮಿಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಮಿಕರ ಯಾವುದೇ ಸಮಸ್ಯೆ ಇದ್ದರೂ ತನ್ನ ಬಳಿಗೆ ಬಂದು ತಿಳಿಸಬೇಕೆಂದು ಹೇಳಿದರು.









