
ಕೂಡಿಗೆ ಮೇ 3 NEWS DESK : ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಪ್ರಾಂಶುಪಾಲ ಡಾ.ಕೆ.ಬಿ.ಬಸಪ್ಪ ಅವರಿಗೆ ಕಾಲೇಜು ವತಿಯಿಂದ ಬೀಳ್ಕೊಡಲಾಯಿತು. ಸುದೀರ್ಘ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ , ಮೂರು ವರ್ಷ ಒಂಭತ್ತು ತಿಂಗಳು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಪ್ರಾಂಶುಪಾಲ ಡಾ ಕೆ.ಬಿ. ಬಸಪ್ಪ ಅವರನ್ನು ಕಾಲೇಜಿನ ಉಪನ್ಯಾಸಕರು ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಸನ್ಮಾನಿಸಿ ಗೌರವಿಸಿದರು. ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಮಂಜುಳಾ ಮಾತನಾಡಿ, ಕಾಲೇಜಿನ ಪ್ರಾಂಶುಪಾಲ ಡಾ.ಬಸಪ್ಪ ಮತ್ತು ಉಪನ್ಯಾಸಕರ ಸಮನ್ವಯತೆಯಿಂದ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ಬರುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಸೇವೆಯಲ್ಲಿ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವದಲ್ಲಿ ಸಾರ್ಥಕತೆ ಕಂಡುಕೊಂಡು ನಿವೃತ್ತಿ ಹೊಂದುತ್ತಿರುವ ಬಸಪ್ಪ ಅವರ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು. ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಪುಟ್ಟರಾಜು ಮಾತನಾಡಿ, ಪ್ರಾಂಶುಪಾಲ ಡಾ.ಬಸಪ್ಪ ಅವರು ತಮ್ಮ ಕಾಲೇಜಿನ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಕಲಿಕೆ ಬಗ್ಗೆ ಹೊಂದಿದ್ದ ಕಾಳಜಿ ಕುರಿತು ಶ್ಲಾಘಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಡಾ.ಬಸಪ್ಪ, ತಾವು ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ಕಾಲೇಜಿನಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಹಾಗೂ ಅಪರೂಪದ ಕ್ಷಣಗಳನ್ನು ಮೆಲಕು ಹಾಕಿದರು. ಈ ಕಾಲೇಜಿನಲ್ಲಿ ಉತ್ತಮ ಉಪನ್ಯಾಸಕರ ತಂಡವು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅವಿರತವಾಗಿ ಶ್ರಮಿಸುತ್ತಿರುವುದರಿಂದ ತಮ್ಮ ಕಾಲೇಜಿಗೆ ಪ್ರತಿ ವರ್ಷ ಉತ್ತಮ ಫಲಿತಾಂಶ ಲಭಿಸುತ್ತಿದೆ ಎಂದರು. ಹಾಸನ ಕಾಲೇಜಿನ ಪ್ರೊ.ಸುಂದರೇಶ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್
ಮತ್ತಿತರರು ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸೋಮಶೇಖರ್ ( ಸೋಮು ) ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ್, ದಿವಾಕರ್, ಸಿ.ಜಿ.ಮಂದಪ್ಪ ಮತ್ತಿತರರು ಇದ್ದರು. ಕಾಲೇಜಿನ ಉಪನ್ಯಾಸಕರಾದ ನಾಗಪ್ಪ ಯಾಲಕ್ಕಿಕಟ್ಟೆ, ಕಾವೇರಮ್ಮ , ಎಂ.ಟಿ.ರಮೇಶ್, ಎಂ.ಯು.ಸತೀಶ್, ಲಿನೆಟ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್, ಗ್ರಾ.ಪಂ.ಸದಸ್ಯ ಟಿ.ಪಿ.ಹಮೀದ್ ಮತ್ತಿತರರು ಇದ್ದರು. ಉಪನ್ಯಾಸಕ ರವೀಶ್ ನಿರ್ವಹಿಸಿದರು. ಇದೇ ವೇಳೆ ನಿವೃತ್ತಗೊಂಡ ಪ್ರಾಂಶುಪಾಲ ಡಾ ಕೆ.ಬಿ.ಬಸಪ್ಪ ಹಾಗೂ ಅವರ ಪತ್ನಿ ಬಿ.ಕೆ.ಭವಾನಿ ಅವರನ್ನು ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಶಾಲು ಹೊದಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.









