
ಸೋಮವಾರಪೇಟೆ ಮೇ 5 NEWS DESK : ತಾಲೂಕಿನ ಶಿರಂಗಾಲ ವಿಭಾಗದ ನಲ್ಲೂರಮ್ಮ ಹಾಗೂ ಬಸವೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ಮಂಜೂರಾದ 2 ಲಕ್ಷ ರೂ,ಗಳ ಡಿ.ಡಿ.ಯ ಮಂಜೂರಾತಿ ಪತ್ರವನ್ನು ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಗ್ರಾಮಸ್ಥರಿಗೆ ವಿತರಿಸಿದರು. ನಂತರ ಅವರು ಮಾತನಾಡಿ, ಶ್ರೀ ಕ್ಷೇತ್ರದಿಂದ ಸಮಾಜಮುಖಿಯಾಗಿ ಕೈಗೊಂಡ ಕಾರ್ಯಕ್ರಮಗಳಾದ ಶಿಕ್ಷಣ ಕ್ಷೇತ್ರದಲ್ಲಿ ಶಾಲೆಗಳಿಗೆ ಪೀಠೋಪಕರಣ, ಜ್ಞಾನದೀಪ ಶಿಕ್ಷಕರ ನೇಮಕ ಮಾಡುವುದು, ಉನ್ನತ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ನೀಡುವುದರ ಮೂಲಕ ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವಾಗುತ್ತಿದ್ದಾರೆ ಎಂದರು. ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ, ಗ್ರಾಮೀಣ ರೈತರಿಗೆ ಅನುಕೂಲವಾಗುವಂತೆ ಹಾಲು ಉತ್ಪಾದಕರ ಸಂಘಗಳಿಗೆ ಅನುದಾನ, ನಿರ್ಗತಿಕರಿಗೆ ಮಾಶಾಸನ, ವಿಶೇಷಚೇತನರಿಗೆ ಪರಿಕರಗಳ ವಿತರಣೆ ಸೇರಿದಂತೆ ಶ್ರೀ ಕ್ಷೇತ್ರದ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಈ ಸಂದರ್ಭ ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಂ.ಚೇತನ್, ಕಾರ್ಯದರ್ಶಿ ರವಿ, ಒಕ್ಕೂಟದ ಅಧ್ಯಕ್ಷೆ ಮಂಜುಳಾ, ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಮತ್ತಿತರರು ಇದ್ದರು.









