
ಮಡಿಕೇರಿ ಮೇ 5 NEWS DESK : ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗೌಡ ಜನಾಂಗದ ನಡುವಿನ 3ನೇ ಆವೃತ್ತಿಯ ಟಿ-20 ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ (ಜಿಪಿಎಸ್) ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ದಿ ಎಲೈಟ್ ಕ್ರಿಕೆಟ್ ಕ್ಲಬ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಏ.20 ರಂದು ಆರಂಭಗೊಂಡ ಕ್ರಿಕೆಟ್ ಪಂದ್ಯಾವಳಿಯಲ್ಲಿ 10 ಫ್ರಾಂಚೈಸಿ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್ ಹಾಗೂ ದಿ ಎಲೈಟ್ ಕ್ಲಬ್ ಫೈನಲ್ ಪಂದ್ಯಾವಳಿಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಯಿತು. ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಿ ಎಲೈಟ್ ಕ್ರಿಕೆಟ್ ಕ್ಲಬ್ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 142 ರನ್ ಕಲೆ ಹಾಕಿತು. ಆಟಗಾರ ಅಂಜನ್ 56 ಎಸೆತಗಳಲ್ಲಿ ಆಕರ್ಷಕ ಅರ್ಧ ಶತಕ ಸಿಡಿಸಿದರು. ಈ ಗುರಿಯನ್ನು ಬೆನ್ನತ್ತಿದ್ದ ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್ 17 ಓವರ್ ಅಂತ್ಯದಲ್ಲಿ 4 ವಿಕೆಟ್‍ಗಳನ್ನು ಕಳೆದುಕೊಂಡು ಅಗತ್ಯ 143 ರನ್ ಕಲೆ ಹಾಕಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್ ಪರ ಲೋಕೇಶ್ 21 ಬಾಲ್‍ಗಳಲ್ಲಿ 47 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮಹಿಳಾ ಕ್ರಿಕೆಟ್ ಫಲಿತಾಂಶ :: ಕೊಡಗು ಗೌಡ ಯುವ ವೇದಿಕೆ ಸಹಯೋಗದಲ್ಲಿ ಕೊಡಗು ಹಾಗೂ ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ವತಿಯಿಂದ ನಡೆದ ಗೌಡ ಮಹಿಳಾ ಕ್ರಿಕೆಟ್‍ನಲ್ಲಿ ದಿ ಎಲೈಟ್ ಕ್ರಿಕೆಟ್ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿತು. ದಿ ಎಲೈಟ್ ಕ್ರಿಕೆಟ್ ಕ್ಲಬ್ ಹಾಗೂ ಈಗಲ್ಸ್ ರೈಡರ್ಸ್ ತಂಡಗಳು ಟ್ರೋಫಿಗಾಗಿ ಸೆಣಸಾಡಿದವು.
ಸಭಾ ಕಾರ್ಯಕ್ರಮ :: ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿದರು. ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಪಾಲ್ಗೊಂಡು ಮಾತನಾಡಿ, ಕೊಡಗು ಕ್ರೀಡಾಪಟುಗಳ ತವರೂರಾಗಿದ್ದು, ಇದಕ್ಕೆ ಪೂರಕವಾಗಿ ಕ್ರೀಡಾಕೂಟಗಳು ನಡೆಯುತ್ತಿರುವುದು ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಸಾಕ್ಷಿಯಾಗಿದೆ. ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ತೊಡಗಿಸಿಕೊಳ್ಳುತ್ತಿರುವುದು ಗಮನಾರ್ಹ ವಿಷಯವಾಗಿದೆ ಎಂದು. ಕೇಂದ್ರ ಸರಕಾರ ಜಾತಿ ಗಣತಿ ನಡೆಸಲು ಮುಂದಾಗಿದ್ದು, ಜನಾಂಗದವರು ಈ ಪ್ರಕ್ರಿಯೆಯಲ್ಲಿ ಒಂದೇ ರೀತಿಯಲ್ಲಿ ಜಾತಿಯನ್ನು ನಮೂದು ಮಾಡಿ ಅಸ್ತಿತ್ವ ಉಳಿಸಿಕೊಳ್ಳಬೇಕು. ಜಾತಿ ಮೇಲೆ ಅಭಿಮಾನದೊಂದಿಗೆ ದೇಶ ಮೊದಲು ಎಂಬ ಭಾವನೆ ಎಲ್ಲರಲ್ಲೂ ಇರಬೇಕು ಎಂದು ಕರೆ ನೀಡಿದರು. ಭಾರತ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಪದ್ಮಶ್ರೀ ಶೇಖರ್ ನಾಯಕ್ ಮಾತನಾಡಿ, ಕ್ರೀಡೆ ದೇಶವನ್ನು ಒಗ್ಗಟ್ಟು ಮಾಡುತ್ತದೆ ಎಂದು ಅಭಿಪ್ರಾಯಿಸಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಮಾತನಾಡಿ, ವರ್ಷದಿಂದ ವರ್ಷಕ್ಕೆ ಅದ್ಧೂರಿಯಾಗಿ ಪಂದ್ಯಾವಲಿ ಆಯೋಜಿಸಲಾಗುತ್ತಿದೆ. ಜನಾಂಗದವನ್ನು ಒಂದುಗೂಡಿಸಲು ಈ ರೀತಿಯ ಕಾರ್ಯಕ್ರಮ ಪೂರಕವಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸ್ಥಳೀಯವಾಗಿ ವೇದಿಕೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಒಕ್ಕೂಟ ಶ್ರಮಿಸಲಿದೆ ಎಂದರು. ಕೊಡಗು ಗೌಡ ಯುವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಯುವ ವೇದಿಕೆ ಕ್ರೀಡಾ ಸಮಿತಿ ಸಂಚಾಲಕ ಕುಟ್ಟನ ಪ್ರಶಾಂತ್, ನಗರಸಭಾ ಸದಸ್ಯೆ ಶ್ವೇತಾ ಪ್ರಶಾಂತ್, ಕೊಡಗು-ದಕ್ಷಿಣ ಕನ್ನಡ ಗೌಡ ಮಹಿಳಾ ಒಕ್ಕೂಟ ಅಧ್ಯಕ್ಷೆ ಮೂಟೇರ ಪುಷ್ಪಾವತಿ, ಸ್ಥಾಪಕ ಅಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್, ದಾನಿಗಳಾದ ತೆಕ್ಕಡೆ ಪ್ರಜ್ವಲ್, ಹಿರಿಯರಾದ ತುಂತಜ್ಜಿರ ಗಣೇಶ್, ಅಂಬೆಕಲ್ ಕುಶಾಲಪ್ಪ, ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಚೇರಂಬಾಣೆ ಗೌಡ ಸಮಾಜ ಅಧ್ಯಕ್ಷ ಕೊಡಪಾಲು ಗಪ್ಪು ಗಣಪತಿ, ನಿವೃತ್ತ ಪೊಲೀಸ್ ಅಧಿಕಾರಿ ಚೊಕ್ಕಾಡಿ ಅಪ್ಪಯ್ಯ, ಅಮೆಚೂರು ಕಬ್ಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ದುಗ್ಗಳ ಕಪಿಲ್ ಸೇರಿದಂತೆ ಇನ್ನಿತರರು ಹಾಜರಿದ್ದರು. ಪರಿಚನ ಸತೀಶ್ ಸ್ವಾಗತಿಸಿ, ಕಟ್ಟೆಮನೆ ಸೋನಾಜಿತ್ ನಿರೂಪಿಸಿ, ವಂದಿಸಿದರು.









