
ಸುಂಟಿಕೊಪ್ಪ ಮೇ 5 NEWS DESK : ಸುಂಟಿಕೊಪ್ಪ ಸಮೀಪದ ಹರದೂರಿನಲ್ಲಿ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಶ್ರದ್ಧಾಭಕ್ತಿಯಿಂದ ಜರುಗಿತು. ಗುಂಟುಕುಟ್ಟಿ ಸಮೀಪದ ಮುತ್ತಿನತೋಟದಲ್ಲಿರುವ ವಿಷ್ಣುಮೂರ್ತಿ ದೇವಾಲಯದಲ್ಲಿದ್ದ ಬಂಡರವನ್ನ ಹರದೂರಿನ ಆಮೆಮನೆ ಸುಬ್ಬಯ್ಯನವರ ಗದ್ದೆಗೆ ತಂದಿರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಮೇಲೇರಿಗೆ ಅಗ್ನಿ ಸ್ಪರ್ಷ ಮಾಡಲಾಯಿತು. ವಿಷ್ಣುಮೂರ್ತಿ ದೈವದ ಒತ್ತೆಕೋಲದ ಅಂಗವಾಗಿ ಕುಲ್ಚಾಟ್ ದೈವದ ಕೋಲ, ವಿಷ್ಣು ಮೂರ್ತಿ ಅಗ್ನಿ ಪ್ರವೇಶ, ಗುಳಿಗ ಕೋಲ ಜೊತೆಗೆ ಹರಕೆ ಮತ್ತು ಪ್ರಸಾದ ವಿತರಣೆ ನೆರವೇರಿತು. ಮೂರು ವರ್ಷಗಳಿಗೊಮ್ಮೆ ನಡೆಯುವ ಒತ್ತೆ ಕೋಲಕ್ಕೆ ಹರದೂರು, ಗರಂಗಂದೂರು, ಮಾದಪುರ, ಪನ್ಯ, ಸುಂಟಿಕೊಪ್ಪ ಸೇರಿದಂತೆ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.










