
ಕುಶಾಲನಗರ ಮೇ 6 NEWS DESK : ದೇಶದ ಎಲ್ಲೆಡೆ ಹಿಂದುಗಳ ರಕ್ಷಣೆ ಸಂಬಂಧ ಶಕ್ತಿಯುತ ಜಾಗೃತ ಸಮಾಜ ನಿರ್ಮಾಣದ ಅಗತ್ಯತೆ ಇದೆ ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಕರೆ ನೀಡಿದ್ದಾರೆ. ಕುಶಾಲನಗರದಲ್ಲಿ ನಡೆದ ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್ಮೆಂಟ್ ಟ್ರಸ್ಟ್ ಆಶ್ರಯದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದುಗಳ ಹತ್ಯೆ ಹಾಗೂ ಹಿಂದೂ ಕಾರ್ಯಕರ್ತರ ಕಗ್ಗೊಲೆಯನ್ನು ಖಂಡಿಸಿ ನಡೆದ ಮೌನ ಮೆರವಣಿಗೆ ಮತ್ತು ಪ್ರತಿಭಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಶ್ಮೀರದಲ್ಲಿ ನಡೆದ ಉಗ್ರರ ಕೃತ್ಯವನ್ನು ಖಂಡಿಸಿದ ಬೋಪಯ್ಯ ಅಮಾಯಕ ಯುವಕ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಗೆ ಕಾರಣಕರ್ತರಾದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಒಂದು ತಿಂಗಳು ಕಳೆದರೂ ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ ಎಂದ ಅವರು, ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿದರು. ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಿಂದುಗಳ ಹತ್ಯೆಗಳು ಅಧಿಕವಾಗುತ್ತಿವೆ. ರಾಷ್ಟ್ರದಲ್ಲಿ ಭಯೋತ್ಪಾದನೆ ಮಟ್ಟ ಹಾಕುವ ಕೆಲಸ ಕೇಂದ್ರ ಸರ್ಕಾರದ ಮೂಲಕ ನಡೆಯುತ್ತಿದ್ದು, ಅವಕಾಶ ದೊರೆತಲ್ಲಿ ತಾನು ಕೂಡ ಯುದ್ಧದಲ್ಲಿ ಪಾಲ್ಗೊಳ್ಳಲು ಸಿದ್ಧ ಎಂದು ರಂಜನ್ ಹೇಳಿದರು. ಮೇಜರ್ ಜನರಲ್ ನಂದಾ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಒಗ್ಗಟ್ಟಿನ ಅಗತ್ಯ ಇದೆ. ಪ್ರತಿ ಮನೆ ಮನೆಗಳಲ್ಲಿ ಈ ಬಗ್ಗೆ ಚರ್ಚೆ ಆಗಬೇಕಾಗಿದೆ. ಅರಿವು ಮೂಲಕ ರಕ್ಷಣೆ ಪಡೆಯುವ ಕೆಲಸ ಆಗಬೇಕಾಗಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ ಕೊಡಗಿನಲ್ಲಿ ಕಾಂಗ್ರೆಸ್ ಆಡಳಿತದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಟ್ರಸ್ಟ್ ಸಂಚಾಲಕರಾದ ಕಾಯಪಂಡ ವಿಷ್ಣುನಾಚಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅಗಲಿ ಒಂದು ತಿಂಗಳು ಕಳೆದಿದೆ. ಆದರೆ ಆರೋಪಿಗಳು ನಿರಾತಂಕವಾಗಿ ಓಡಾಡಿಕೊಂಡಿದ್ದು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದರು. ಕಾರ್ಯಕ್ರಮಕ್ಕೆ ಮುನ್ನ ವಿನಯ್ ಸೋಮಯ್ಯ, ಕಾಶ್ಮೀರದಲ್ಲಿ ಹತ್ಯೆಗೊಳಗಾದ ಪ್ರವಾಸಿಗರು ಮತ್ತು ಸುಹಾಸ್ ಶೆಟ್ಟಿ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಮೌನ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಕುಶಾಲನಗರ ಗಣಪತಿ ದೇವಾಲಯ ಬಳಿ ಮಾನವ ಸರಪಳಿ ರಚಿಸಿದರು. ನಂತರ ಮೆರವಣಿಗೆ ಮೂಲಕ ತಾಲೂಕು ತಹಸೀಲ್ದಾರ್ ಕಚೇರಿಗೆ ಸಾಗಿ ತಹಸಿಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಟ್ರಸ್ಟ್ ಜಿಲ್ಲಾಧ್ಯಕ್ಷ ಮೈನಾ ಲೋಕೇಶ್, ಉಪಾಧ್ಯಕ್ಷ ಪಿ.ಗಿರೀಶ್, ಸಂಘಟನಾ ಕಾರ್ಯದರ್ಶಿ ರವಿಶಂಕರ್, ಬಿಜೆಪಿ ತಾಲೂಕು ಅಧ್ಯಕ್ಷ ಗೌತಮ್, ಪುರಸಭೆ ಸದಸ್ಯರಾದ ಜಯವರ್ಧನ್ ಅಮೃತರಾಜ್ , ಪ್ರಮುಖರಾದ ಭಾರತೀಶ್, ನಗರಾಧ್ಯಕ್ಷ ಎಂಎಂ ಚರಣ್, ಜಿ ಎಲ್ ನಾಗರಾಜ್, ಸೋಮೇಶ್, ಕಾಂತಿ ಸತೀಶ್, ನಾಗೇಶ್ ಕುಂದಲ್ಪಾಡಿ, ಆರ್.ಕೆ.ಚಂದ್ರ, ಶರತ್, ಯಮುನಾ ಚಂಗಪ್ಪ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಗಣಿ ಪ್ರಸಾದ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ವಿನಯ್ ಸೋಮಯ್ಯ ಸಹೋದರ ವಿವೇಕ್ ಸೋಮಯ್ಯ, ಪವಿತ್ರ ರತ್ನ ಯತೀಶ್, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಬಿಜೆಪಿ ಸೇರಿದಂತೆ ಹಿಂದೂ ಪರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಇದ್ದರು.









