

ಮಡಿಕೇರಿ ಮೇ 6 NEWS DESK : ಜಮ್ಮು ಕಾಶ್ಮೀರದ ಪಹಲ್ಗಾಮ್‍ನಲ್ಲಿ ಪಾಕಿಸ್ತಾನಿ ಪ್ರಚೋದಿತ ಉಗ್ರಗಾಮಿಗಳಿಂದ ದಾಳಿಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇದರ ಜೊತೆಯಲ್ಲೆ ಕೊಡಗು ಜಿಲ್ಲೆಯಲ್ಲಿ ನಕಲಿ ದಾಖಲೆಗಳೊಂದಿಗೆ ಇರಬಹುದಾದ ಪಾಕಿಸ್ತಾನಿಗಳು ಹಾಗೂ ಬಾಂಗ್ಲಾದೇಶಿಗರನ್ನು ಗುರುತಿಸಿ ತಕ್ಷಣ ಹೊರಗಟ್ಟಬೇಕೆಂದು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಆಗ್ರಹಿಸಿದ್ದಾರೆ. ನಗರದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಈಗಾಗಲೆ ಭಾರತ ಬಿಟ್ಟು ಹಿಂತೆರಳುವಂತೆ ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಅದರಂತೆಯೆ ಜಿಲ್ಲೆಯಲ್ಲಿ ಇರಬಹುದಾದ ಪಾಕಿಸ್ತಾನಿಗಳು ಹಾಗೂ ಬಾಂಗ್ಲಾದೇಶಿಗರ ದಾಖಲೆ ಪತ್ರಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಬೇಕು. ನಿಯಮ ಉಲ್ಲಂಘಿಸಿ ನಕಲಿ ದಾಖಲೆಯೊಂದಿಗೆ ತಂಗಿದ್ದರೆ ಹೊರ ಕಳಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಬೇಕೆಂದರು. ನಿರಂತರವಾಗಿ ಭಯೋತ್ಪಾದಕರಿಗೆ ನೆರವು ನೀಡುತ್ತಾ ಭಾರತದ ನೆಲದಲ್ಲಿ ಕ್ಷೋಭೆಯನ್ನು ಉಂಟು ಮಾಡುತ್ತಿರುವ ಪಾಕಿಸ್ತಾನವನ್ನು ಭೂಪಟದಲ್ಲೆ ಇಲ್ಲದಂತೆ ಮಾಡಬೇಕೆಂದು ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದರು.
*ಸ್ವಾಗತಾರ್ಹ* ಸದಾಶಿವ ಆಯೋಗದಲ್ಲಿ ಸೂಚಿಸಿರುವಂತೆ ಪರಿಶಿಷ್ಟ ಸಮುದಾಯದ ಉಪ ಪಂಗಡಗಳನ್ನು ಗುರುತಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಜಾತಿ ಗಣತಿಯನ್ನು ಬೆಂಬಲಿಸುತ್ತೇವೆ. ಅತ್ಯಂತ ಸಣ್ಣ ಸಮುದಾಯಗಳನ್ನು ಈ ಗಣತಿ ಕಾರ್ಯದ ಮೂಲಕ ಗುರುತಿಸಿ, ಅವರ ಆಚಾರ, ವಿಚಾರ, ಸಂಸ್ಕೃತಿಯನ್ನು ಉಳಿಸುವ ಕಾರ್ಯದೊಂದಿಗೆ, ಸಣ್ಣ ಸಮುದಾಯಗಳಿಗೂ ಉನ್ನತ ಸ್ಥಾನಕ್ಕೇರುವ ಅವಕಾಶಗಳು ತೆರೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು. *ಅನುದಾನ ಇಲ್ಲ* ಕೊಡಗಿನಲ್ಲಿರುವ ಕಾಂಗ್ರೆಸ್‍ನ ಇಬ್ಬರು ಶಾಸಕರಿಂದ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಹೆಚ್ಚಿನ ಅನುದಾನಗಳು ದೊರೆತಂತೆ ಕಾಣುತ್ತಿಲ್ಲ. ಇವರ ಈ ಅಧಿಕಾರದ ಅವಧಿಯಲ್ಲಿ ಇಲಾಖಾ ಅಧಿಕಾರಿಗಳಿಗೆ ಸ್ವತಂತ್ರವಾಗಿ ತಮ್ಮ ಅಧಿಕಾರವನ್ನು ಚಲಾಯಿಸುವ ಅವಕಾಶವು ದೊರಕುತ್ತಿಲ್ಲವೆಂದು ಆರೋಪಿಸಿದರು. ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಸೂಕ್ತ ಕ್ರಮವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಅವರು ಪೊಲೀಸ್ ಇಲಾಖೆ ಪಕ್ಷವೊಂದರ ಅಣತಿಯಂತೆ ವರ್ತಿಸದೆ, ಜನಪರವಾಗಿ ಕಾರ್ಯನಿರ್ವಹಿಸುವಂತಾಗಬೇಕೆಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಪೆಹಲ್ಗಾಮ್‍ನಲ್ಲಿ ನಡೆದ ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡುವ ಕೆಲಸ ಆಗಬೇಕಾಗಿದೆ. ರಾಜ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ನಕಲಿ ಆಧಾರ್ ಹಾಗೂ ಇನ್ನಿತರ ದಾಖಲೆಗಳನ್ನು ಹೊಂದಿಕೊಂಡು ನೆಲೆಸಿರುವ ಅಕ್ರಮ ವಲಸಿಗರನ್ನು ಗುರುತಿಸಿ ಹೊರ ಕಳುಹಿಸುವ ಕೆಲಸವಾಗಬೇಕೆಂದು ಒತ್ತಾಯಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಭಾರತ ಸರ್ಕಾರ ಉಗ್ರಗಾಮಿಗಳ ವಿರುದ್ಧ ತೆಗೆದುಕೊಳ್ಳುವ ಎಲ್ಲಾ ಕ್ರಮಗಳಿಗೆ ಪಕ್ಷದ ಪೂರ್ಣ ಬೆಂಬಲವಿದೆ. ಆಂತರಿಕವಾಗಿ ನಡೆಯಬಹುದಾದ ಯಾವುದೇ ದೇಶ ದ್ರೋಹಿ ಕೃತ್ಯಗಳನ್ನು ತಡೆಗಟ್ಟಲು ಸಜ್ಜಾಗಿದೆಯೆಂದು ತಿಳಿಸಿದರು. ಕೇಂದ್ರ ಸರ್ಕಾರ ರಾಷ್ಟ್ರೀಯ ಜನಗಣತಿಯ ಸಂದರ್ಭವೆ ಜಾತಿ ಗಣತಿ ಮಾಡಲು ನಿರ್ಧರಿಸಿರುವುದು ಸರಿಯಾದ ಕ್ರಮವಾಗಿದೆ ಎಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಳೂರು ಕಿಶೋರ್ ಕುಮಾರ್ ಮಾತನಾಡಿ, ಜಿಲ್ಲೆಯ ಶಾಸಕರಿಗೆ ತಮ್ಮ ಇಲ್ಲಿಯವರೆಗಿನ ಆಡಳಿತದ ಅವಧಿಯಲ್ಲಿ ಕನಿಷ್ಟ ಭಾಗಮಂಡಲಕ್ಕೆ ತೆರಳುವ ರಸ್ತೆಯನ್ನು ಸರಿಪಡಿಸಲಾಗಿಲ್ಲ. ರಸ್ತೆ ಅವ್ಯವಸ್ಥೆ ಗೊತ್ತಾಗದಿರಲೆಂದು ಕಾಂಗ್ರೆಸ್ ಪ್ರಮುಖರನ್ನು ಹೆಲಿಕಾಪ್ಟರ್ ನಲ್ಲಷ್ಟೆ ಕಾವೇರಿ ಕ್ಷೇತ್ರಕ್ಕೆ ಕರೆತರಲಾಗುತ್ತಿದೆ ಎಂದು ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ವಕ್ತಾರ ಮಹೇಶ್ ಜೈನಿ ಹಾಗೂ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಉಪಸ್ಥಿತರಿದ್ದರು.









