
ಕುಶಾಲನಗರ ಮೇ 6 NEWS DESK : ಕೇಂದ್ರ ಸರ್ಕಾರದ ಕರಕುಶಲ ಮತ್ತು ಜವಳಿ ಮಂತ್ರಾಲಯ ಇಲಾಖೆಯ ಮೈಸೂರಿನ ಕರಕುಶಲ ವಿಸ್ತರಣಾ ಸೇವಾ ಕೇಂದ್ರದ ವತಿಯಿಂದ ಕುಶಾಲನಗರ ಪಟ್ಟಣದ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇ 8 ರಿಂದ ಮೂರು ದಿನಗಳ ಕಾಲ ಕರಕುಶಲ ವಸ್ತುಗಳ ತಯಾರಿಕೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಬಿದಿರು ಕಲೆ, ಮರ ಕೆತ್ತನೆ, ಮಣ್ಣಿನ ಕಲಾಕೃತಿಗಳ ತಯಾರಿಕೆ ಸೇರಿದಂತೆ ಇನ್ನಿತರ ಕರಕುಶಲ ಕಲೆಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿಗಳಿಗೆ ತರಬೇತಿ ಹಾಗೂ ಕರಕುಶಲ ಕಲೆಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ಮೈಸೂರು ಕರಕುಶಲ ವಿಸ್ತರಣಾ ಕೇಂದ್ರದ ಸಹಾಯಕ ನಿರ್ದೇಶಕ ಎಸ್.ವಿನೋತ್ ಕುಮಾರ್ ತಿಳಿಸಿದ್ದಾರೆ. ಕರಕುಶಲ ಕಲೆಯ ಚಟುವಟಿಕೆಗಳ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ದಿಸೆಯಲ್ಲಿ ಹಾಗೂ ಈ ಕಲೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ಜಿಲ್ಲೆಗಳಲ್ಲಿ ಇಂತಹ ಶಿಬಿರಗಳನ್ನು ಸಂಘಟಿಸಲಾಗುತ್ತಿದೆ ಎಂದು ಶಿಬಿರದ ಜಿಲ್ಲಾ ಸಂಯೋಜಕರೂ ಆದ ರಾಜ್ಯ ಕರಕುಶಲ ಕುಶಲಕರ್ಮಿ ಪ್ರಶಸ್ತಿ ಪುರಸ್ಕೃತ ಜಿ.ಧರ್ಮಪ್ಪ ತಿಳಿಸಿದ್ದಾರೆ.
ಶಿಬಿರಕ್ಕೆ ಚಾಲನೆ:: ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇ 8 ರಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿರುವ ಕರಕುಶಲ ತರಬೇತಿ ಶಿಬಿರಕ್ಕೆ ಜಿಲ್ಲಾ ಲೀಡ್ ಬ್ಯಾಂಕ್ ನ ನಿವೃತ್ತ ಪ್ರಬಂಧಕರಾದ ಆರ್.ಕೆ.ಬಾಲಚಂದ್ರ ಚಾಲನೆ ನೀಡಲಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಜಯವರ್ಧನ್ (ಕೇಶವ), ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ, ಪಿಯೂ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ನಾಗೇಂದ್ರಸ್ವಾಮಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.









