
ಕುಶಾಲನಗರ, ಮೇ 8 NEWS DESK : ಕುಶಾಲನಗರ ತಾಲ್ಲೂಕಿನ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ಮುಂಬಡ್ತಿ ಹೊಂದಿದ ಎಂ.ಕೃಷ್ಣಪ್ಪ, ಸಂಸ್ಥೆಯಲ್ಲಿ ಉಪನ್ಯಾಸಕ ಹುದ್ದೆಯಿಂದ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಹುದ್ದೆಗೆ ನಿಯುಕ್ತಿಗೊಂದ ಸಿದ್ದೇಶ್ ಕುಮಾರ್ ಹಾಗೂ ಸಂಸ್ಥೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಯಿಂದ ಸೋಮವಾರಪೇಟೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಅಧೀಕ್ಷಕ ಹುದ್ದೆಗೆ ಮುಂಬಡ್ತಿ ಹೊಂದಿರುವ ಸುಮ ಅವರಿಗೆ ಡಯಟ್ ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಸನ್ಮಾನಿತರನ್ನು ಸನ್ಮಾನಿಸಿ ಮಾತನಾಡಿದ ಡಯಟ್ ಸಂಸ್ಥೆಯ ಉಪ ನಿರ್ದೇಶಕ ( ಅಭಿವೃದ್ಧಿ) ಹಾಗೂ ಪ್ರಾಂಶುಪಾಲ ಎಂ.ಚಂದ್ರಕಾಂತ್ , ಸಂಸ್ಥೆಯಲ್ಲಿ ಸದಾ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ಕೃಷ್ಣಪ್ಪ, ಸಿದ್ದೇಶ್ ಕುಮಾರ್ ಮತ್ತು ಸುಮ ವಿದ್ಯಾರ್ಥಿ ವೃಂದ ಹಾಗೂ ಸಿಬ್ಬಂದಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಜತೆಗೆ ಶಿಕ್ಷಕರ ತರಬೇತಿ ಕಾರ್ಯಗಳು ಸೇರಿದಂತೆ ಸಂಸ್ಥೆಯ ಏಳ್ಗೆಗೆ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು. ಬಿಇಓ ಎಂ.ಕೃಷ್ಣಪ್ಪ ಹಾಗೂ ಅಕ್ಷರ ದಾಸೋಹ ಯೋಜನೆಯ ಅಧಿಕಾರಿ ಸಿದ್ದೇಶ್ ಕುಮಾರ್, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಪ್ರಾಂಶುಪಾಲ ಚಂದ್ರಕಾಂತ್ ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಳ್ಯ ಬಿಇಓ ಎಂ.ಕೃಷ್ಣಪ್ಪ, ತಾವುಗಳು ಡಯಟ್ ಸಂಸ್ಥೆಯಲ್ಲಿ 20 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಹಿರಿಯ ಅಧಿಕಾರಿಗಳ ಸಹಕಾರದಿಂದ ಪ್ರಾಮಾಣಿಕ ಸೇವೆ ಸಲ್ಲಿಸಲು ಸಾಧ್ಯವಾಯಿತು. ಡಯಟ್ ನಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಹೆಚ್ಚಿನ ಜ್ಞಾನ ಪಡೆಯಲು ಸಾಧ್ಯ ಎಂದರು. ಸಿದ್ದೇಶ್ ಕುಮಾರ್ ಮಾತನಾಡಿ, ಕೂಡಿಗೆ ಡಯಟ್ ಸಂಸ್ಥೆಯು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿದ್ದು, ಕಾಲೇಜಿನ ಉತ್ತಮ ವಾತಾವರಣ, ಸಂಸ್ಥೆಯಲ್ಲಿನ ಸೇವಾ ದಿನಗಳು ಮತ್ತು ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೊಂದಿಗೆ ಹೊಂದಿದ ಪ್ರೀತಿ- ವಿಶ್ವಾಸದ ಒಡನಾಟವನ್ನು ಮೆಲುಕು ಹಾಕಿದರು. ಸುಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಹೇಮಂತ್ ರಾಜ್, ಸ್ವಾಮಿ, ಬಿ.ಎನ್.ಪುಷ್ಪ, ಮಡಿಕೇರಿ ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್, ಉಪನ್ಯಾಸಕರಾದ ವಿ. ವಿಜಯ್, ಕೆ.ಎಸ್.ನಳಿನಾಕ್ಷಿ, ಗಾಯತ್ರಿ, ಗೀತಾ, ಲತಾ, ಕಛೇರಿಯ ಅಧಿಕ್ಷಕಿ ಜಯಂತಿ, ತಾಂತ್ರಿಕ ಸಹಾಯಕ ಹರೀಶ್ ಚಾಮರಾಯನಕೋಟೆ, ಪ್ರಾಥಮಿಕ ಶಾಲಾ ಶಿಕ್ಷಕ ಗೋವಿಂದರಾಜ್, ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು ಇದ್ದರು.










