
ಮಡಿಕೇರಿ ಮೇ 8 NEWS DESK : ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ ಮೇ 17 ಹಾಗೂ 18 ರಂದು ನಡೆಯಲಿದ್ದು, ಮೇ 10ರಿಂದ ಹಬ್ಬದ ಕಟ್ಟು ಬೀಳಲಿದೆ. ಕಟ್ಟುಪಾಡುಗಳನ್ನು ಗ್ರಾಮಸ್ಥರು ಪಾಲಿಸಬೇಕು ಎಂದು ತಕ್ಕಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಶ್ರೀ ಭದ್ರಕಾಳಿ ಹಾಗೂ ಶ್ರೀ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರತಿಯೊಂದು ಊರಿನ ಹಬ್ಬಗಳಿಗೂ ಅದರದೇಯಾದ ಇತಿಹಾಸ ಹಾಗೂ ಕಟ್ಟುಪಾಡುಗಳಿರುತ್ತದೆ. ಮೇ 10ರ ಸಂಜೆ 5 ಗಂಟೆಯಿಂದ ಮೇ 18ರವರೆಗೆ ಹಳ್ಳಿಗಟ್ಟು ಗ್ರಾಮದ ವ್ಯಾಪ್ತಿಯೊಳಗೆ ಕಾಫಿ ಗಿಡಗಳ ಕಪಾತು ಸೇರಿದಂತೆ ಹಸಿರು ಮರ ಗಿಡಗಳನ್ನು ಕಡಿಯುವಂತಿಲ್ಲ ಹಾಗೂ ಊರಿನೊಳಗೆ ಪ್ರಾಣಿ ವಧೆ ಹಾಗೂ ಪ್ರಾಣಿ ಹಿಂಸೆ ಸೇರಿದಂತೆ ಊರಿನ ಇತರ ಯಾವುದೇ ಮನೆಗಳಲ್ಲಿ ಕೂಡ ಆಡಂಬರದ ಪೂಜಾವಿಧಿ ವಿಧಾನಗಳನ್ನು ಮಾಡುವಂತಿಲ್ಲ. ದೈವದ ಕೋಲ ಸೇರಿದಂತೆ ಇತರ ಆಡಂಬರದ ದೈವಿಕ ಕಾರ್ಯಗಳನ್ನು ಮಾಡುವಂತಿಲ್ಲ. ಹಬ್ಬಕ್ಕೆ ಇನ್ನು ಹತ್ತು ಹಲವಾರು ಕಟ್ಟುಪಾಡುಗಳಿದ್ದು, ಗ್ರಾಮದ ಪ್ರತಿಯೊಬ್ಬರು ಹಬ್ಬದ ಕಟ್ಟು ಕಟ್ಟಳೆಗಳನ್ನು ಪಾಲಿಸಬೇಕು. ತಪ್ಪಿದ್ದಲ್ಲಿ ದಂಡ ವಿಧಿಸಲಾಗುವುದೆಂದು ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದರು.










