
ಮಡಿಕೇರಿ ಮೇ 8 NEWS DESK : ಕೊಡವ ಬಾಳೋಪಾಟ್ ಹಾಗೂ ಸಂಸ್ಕೃತಿ ವಿಚಾರವಾಗಿ ಆಳವಾದ ಅಧ್ಯಯನದಲ್ಲಿ ತೊಡಗಿರುವ ಆಸ್ಟ್ರೇಲಿಯ ದೇಶದ ಜನಾಂಗ ಶಾಸ್ತ್ರಜ್ಞ ಜಾನ್‍ಜೇಮ್ಸ್ ನೇಪಿಯರ್ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರನ್ನು ಇಂದು ಭೇಟಿಯಾಗಿ ಚರ್ಚಿಸಿದರು. ವಿರಾಜಪೇಟೆಯಲ್ಲಿರುವ ನಾಚಯ್ಯ ಸ್ವಗೃಹಕ್ಕೆ ಭೇಟಿ ನೀಡಿದ ನೇಪಿಯರ್, ಕೊಡವ ಸಂಸ್ಕೃತಿಯು ವಿಶ್ವದಲ್ಲಿಯೇ ವಿಶಿಷ್ಟವಾಗಿದ್ದು, ಇಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಓರ್ವ ಪತ್ರಕರ್ತನಾಗಿ ಹಾಗೂ ಪ್ರಸ್ತುತ ಅಕಾಡೆಮಿ ಅಧ್ಯಕ್ಷರಾಗಿ ನಾಚಯ್ಯ ಅವರ ಸೇವೆಯನ್ನು ಶ್ಲಾಘಿಸಿದರು. ಆಸ್ಟ್ರೇಲಿಯಾ ದೇಶದ ಸಿಡ್ನಿ ಹ್ಯಾರೋಸಿಟಿಯ ಶಾಸಕರಾಗಿರುವ ಕೊಡಗು ಮೂಲದ ಚರಿಷ್ಮ ಕಲಿಯಂಡ ಅವರನ್ನು ಕಂಡು ಮಾತನ್ನಾಡುವುದಾಗಿ ಹೇಳಿದ ಅವರು, ತಾನು ಕೊಡವ ಬಾಳೋಪಾಟ್ ಹಾಗೂ ಕೊಡವ ಸಂಸ್ಕೃತಿಯ ವಿಚಾರವಾಗಿ ಆಸ್ಟ್ರೇಲಿಯಾದಲ್ಲಿ ಹಲವು ಲೇಖನಗಳನ್ನು ಬರೆದಿರುತ್ತೇನೆ. ಅಧ್ಯಯನ ನಿಮಿತ್ತ ಕೊಡಗಿಗೆ 2008 ರಿಂದ ಬರುತ್ತಿದ್ದು ಮುಂದಿನ ದಿನಗಳಲ್ಲಿ ಪುಸ್ತಕ ಹೊರತರಲಿದ್ದೇನೆ ಎಂದರು.
ಈಗಾಗಲೇ ಹಲವರಿಂದ ಮಾಹಿತಿ ಸಂಗ್ರಹಿಸಿದ್ದು, ಬಾಳೋಪಾಟ್‍ನಲ್ಲಿ ಬರುವ ಶಬ್ದಾರ್ಥ, ಗೂಡಾರ್ಥಗಳನ್ನು ಅಕಾಡೆಮಿ ಅಧ್ಯಕ್ಷರಿಂದ ತಿಳಿದುಕೊಂಡರು.
ಬಾಳೋಪಾಟನ್ನು ಆಧುನಿಕ ತಂತ್ರಜ್ಞಾನದ ಮೂಲಕ ವಿಶ್ವವ್ಯಾಪಿ ಪರಿಚಯಿಸುವ ಬಗ್ಗೆ ಅಕಾಡೆಮಿ ಅಧ್ಯಕ್ಷರ ಜೊತೆ ಉತ್ಸುಕತೆ ತೋರಿದರು. ಹಿರಿಯ ಕೊಡವ ಸಾಹಿತಿಗಳಾದ ಡಾ. ಐ.ಮಾ.ಮುತ್ತಣ್ಣ, ಡಾ.ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ, ಡಾ.ಮೋಗ್ಲಿಂಗ್, ಜೆ. ರಿಕ್ಟರ್ ಕೊಡವ ಸಂಸ್ಕೃತಿಯ ಮೇಲೆ ಬರೆದಿರುವ ಸಾಹಿತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನೇಪಿಯರ್ ಭೇಟಿಯ ಕುರುಹಾಗಿ ಕೊಡವ ಚಿಹ್ನೆಯಿರುವ ಲಾಂಛನವನ್ನು ಮಹೇಶ್ ನಾಚಯ್ಯ ನೀಡಿ ಕೃತಜ್ಞತೆ ತೋರಿದರು. ಈ ವೇಳೆ ಪ್ರಮೀಳ ನಾಚಯ್ಯ ಉಪಸ್ಥಿತರಿದ್ದು ಆತಿಥ್ಯ ನೀಡಿದರು.









