ಮಡಿಕೇರಿ ಜು.3 NEWS DESK : ಮಡಿಕೇರಿ ನಗರದ 3ನೇ ವಾರ್ಡ್‍ನ ತ್ಯಾಗರಾಜ ಕಾಲೋನಿಗೆ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಹಾಗೂ ಉಪಾಧ್ಯಕ್ಷ ಮಹೇಶ್ ಜೈನಿ ಅವರು ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿದರು. ತ್ಯಾಗರಾಜ ಕಾಲೋನಿಯ ಸಾರ್ವಜನಿಕರ ಸಮಸ್ಯೆಗಳು ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯ ಬಗ್ಗೆ ನಗರಸಭೆಯ ಮಾಸಿಕ ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯ ಎಂ.ಎಂ.ಮೊಹಮ್ಮದ್ ಯಾಕುಬ್ ಅವರು ಗಮನ ಸೆಳೆದು ಸ್ಥಳಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭ ಮಾತನಾಡಿದ ಮೊಹಮ್ಮದ್ ಯಾಕುಬ್, ತ್ಯಾಗರಾಜ ಕಾಲೋನಿಯಲ್ಲಿ ಆಶ್ರಯ ಮನೆ ನಿರ್ಮಾಣಗೊಂಡು ಸುಮಾರು 30 ವರ್ಷ ಕಳೆದಿದ್ದರು ಸಮರ್ಪಕವಾದ ರಸ್ತೆ ವ್ಯವಸ್ಥೆ ಇಲ್ಲದಾಗಿದೆ. ಬರೆ ಕುಸಿಯುವ ಹಂತದಲ್ಲಿದ್ದು, ನಿವಾಸಿಗಳು ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದರು. ಮತ್ತೊಂದು ಭಾಗದಲ್ಲಿ ಮಳೆಯಿಂದ ಬರೆ ಕುಸಿದಿದ್ದು, ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ 2023ರಲ್ಲಿ ಸಾರ್ವಜನಿಕರು ಅರ್ಜಿಯ ಮೂಲಕ ನಗರಸಭೆಗೆ ಮನವಿ ಸಲ್ಲಿಸಿದ್ದರು. ಅಲ್ಲದೇ ಶಾಸಕರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಶೀಘ್ರ ರಸ್ತೆಗೆ ತಡೆಗೋಡೆ ನಿರ್ಮಿಸಬೇಕು ಮತ್ತು ಕಾಂಕ್ರೀಟ್ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದ್ದರಿಂದ ಆದಷ್ಟು ಬೇಗ ರಸ್ತೆ ನಿರ್ಮಿಸಿಕೊಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಮೊಹಮ್ಮದ್ ಯಾಕುಬ್ ಮನವಿ ಮಾಡಿದರು. ಬಾಲಕೃಷ್ಣ ಎಂಬುವವರ ಮನೆಯ ಬಳಿ ಸುಮಾರು 5 ಮನೆಗಳಿದ್ದು, ಇಲ್ಲಿ ಕೂಡ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡುವಂತೆ ಕೋರಿದರು. ಈ ಸಂದರ್ಭ ಪ್ರಮುಖರಾದ ಮುನೀರ್ ಮಾಚಾರ್, ಹಸೈನ್, ಆಸಿಫ್, ಹಾರಿಸ್, ಬಾಲಕೃಷ್ಣ ಹಾಗೂ ಸ್ಥಳೀಯ ನಿವಾಸಿಗಳು ಹಾಜರಿದ್ದರು.











