ಮಡಿಕೇರಿ ಜು.4 NEWS DESK : ಕೊಡಗು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಕೌಶಲ್ಯಾಧಾರಿತ ಶಿಕ್ಷಣ ಸಾಮಥ್ರ್ಯ ಹೊಂದಿರುವಂತೆ ರೂಪಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ.ಅಶೋಕ ಸಂಗಪ್ಪ ಆಲೂರ ಅವರು ಅಭಿಪ್ರಾಯಿಸಿದರು. ಕೊಡಗು ವಿಶ್ವವಿದ್ಯಾಲಯದ ಮುಖ್ಯ ಕೇಂದ್ರ, ಘಟಕ ಮಹಾವಿದ್ಯಾಲಯ ಹಾಗೂ ಸಂಯೋಜಿತ ಮಹಾವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ “ವೃತ್ತಿ ಮಾರ್ಗದರ್ಶನ ಮತ್ತು ವ್ಯಕ್ತಿತ್ವ ಅಭಿವೃದ್ಧಿ ಒಂದು ದಿನದ ವಿಶೇಷ ಕಾರ್ಯಾಗಾರ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿರುವ ಶೋಷಿತ ಸಮುದಾಯಗಳ, ಬುಡಕಟ್ಟು ಜನಾಂಗದ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಹಿನ್ನೆಲೆಯಿಂದ ಬಂದಂತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಕೊಡಗು ವಿಶ್ವವಿದ್ಯಾಲಯವು ವಿಶೇಷ ಕಾರ್ಯಾಗಾರವನ್ನು ಆಯೋಜಿಸಿದ್ದು, ಈ ಮೂಲಕ ಕೊಡಗು ವಿಶ್ವವಿದ್ಯಾಲಯದ ಅಧೀನದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬರಿಗೂ ಉದ್ಯೋಗಾವಕಾಶಗಳನ್ನು ಒದಗಿಸಿಕೊಡುವುದು, ಮೂಲ ಕೋರ್ಸ್‍ಗಳ ಜೊತೆಗೆ ಹೆಚ್ಚುವರಿ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಒಡಂಬಡಿಕೆಯೊಂದಿಗೆ ಉಚಿತವಾಗಿ ದೊರಕಿಸಿಕೊಡುವ ಉದ್ದೇಶ ಹೊಂದಿದೆ ಎಂದರು. ‘ಕ್ಯಾಂಪಸ್ ಸೆಲೆಕ್ಷನ್’ನ ಆಯೋಜಿಸಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗವಾಕಶವನ್ನು ಕಲ್ಪಿಸಿಕೊಡುವ ದೂರದೃಷ್ಠಿಯನ್ನೊಳಗೊಂಡಿದೆ. ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಸಂದರ್ಶನದ ತಯಾರಿಯ ಕೌಶಲ್ಯ, ಜ್ಞಾನ ಮತ್ತು ಆ ಹುದ್ದೆಗೆ ಸೂಕ್ತ ಮತ್ತು ನಿರ್ಣಾಯಕ ಪಾತ್ರ ವಹಿಸುವ ಅಂಶಗಳನ್ನು ಮತ್ತು ಸಂದರ್ಶನದ ತಯಾರಿಯ ಪ್ರಯೋಜನವನ್ನು ನೀಡುವ ವಿಧಾನಗಳನ್ನು ಈ ಕಾರ್ಯಾಗಾರ ಹೊಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಸುರೇಶ ಎಂ., ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಹಕಾರ ಸಂಘಗಳ ನಿವೃತ್ತ ಜಂಟಿ ರಿಜಿಸ್ಟ್ರಾರ್ ಎಸ್.ಹೆಚ್. ಸಂತೋಷ್ ಕುಮಾರ್, ಬೆಂಗಳೂರು ಒ.ಎ.ಎಂ. ಬುಷ್‍ಸ್ಪ್ರಿಂಗ್ ಎಂಟರ್‍ಪ್ರೈಸಸ್ ಲಿಮಿಟೆಡ್‍ನ ಜನರಲ್ ಮ್ಯಾನೇಜರ್ ಬಿ.ಪಿ.ವೆಂಕಟೇಶಮೂರ್ತಿ ಹಾಜರಿದ್ದರು. ವಿಶೇಷ ಕಾರ್ಯಾಗಾರದಲ್ಲಿ ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಮುಖ್ಯ ಆವರಣ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮಹಾವಿದ್ಯಾಲಯ, ಗೋಣಿಕೊಪ್ಪ ಕಾವೇರಿ ಮಹಾವಿದ್ಯಾಲಯ ಹಾಗೂ ವಿರಾಜಪೇಟೆಯ ಸೆಂಟ್ ಆನ್ಸ್ ಮಹಾವಿದ್ಯಾಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಬೋಧಕ ವೃಂದದವರು ಭಾಗವಹಿಸಿದ್ದರು.











