ವಿರಾಜಪೇಟೆ ಜು.12 NEWS DESK : ವಿರಾಜಪೇಟೆ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕೃಷಿ ಕಾರ್ಯಕ್ರಮದಡಿಯಲ್ಲಿ ಪೊನ್ನಂಪೇಟೆ ವಲಯದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. ಶಾಲೆಯ ಉಪ ಪ್ರಾಂಶುಪಾಲರಾದ ಚಂಗಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪರಿಸರ ಸಂರಕ್ಷಣೆ ಹಾಗೂ ಕಾರ್ಯಕ್ರಮದ ಬಗ್ಗೆ ವಲಯ ಮೇಲ್ವಿಚಾರಕ ನಾಗರಾಜ್ ಪ್ರಾಸ್ತವಿಕವಾಗಿ ಮಾತನಾಡಿದರು. ಪೊನ್ನಂಪೇಟೆ ಪಟ್ಟಣ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪ ಮಾತನಾಡಿ ಗಿಡಮರಗಳನ್ನು ಬೆಳೆಸಬೇಕು, ನೆಟ್ಟ ಗಿಡಗಳನ್ನು ಪೋಷಣೆ ಮಾಡಬೇಕು, ಪರಿಸರ ಸಂರಕ್ಷಣೆಯಿಂದ ಶುದ್ಧವಾದ ಗಾಳಿ ನೀರು ಸಿಗುತ್ತದೆ. ಹಾಗೂ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನೆಯ ಪರಿಸರದಲ್ಲಿ ಗಿಡ ನಾಟಿ ಮಾಡಿ ಪರಿಸರ ಸಂರಕ್ಷಿಸಬೇಕು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಲಯ ಉಪ ಅರಣ್ಯಅಧಿಕಾರಿ ಜೆ.ಕೆ.ಬಿರಾದರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ತಮ್ಮಯ್ಯ, ಕೃಷಿ ಮೇಲ್ವಿಚಾರಕ ವಸಂತ್, ಒಕ್ಕೂಟದ ಪದಾಧಿಕಾರಿಗಳಾದ ರೇಖಾ ಶ್ರೀಧರ್, ಅನುಪಮಾ, ಪೊನ್ನಂಪೇಟೆ ಸೇವಾ ಪ್ರತಿನಿಧಿ ಗೌರಿ ಶಾಲಾ ಶಿಕ್ಷಕರಾದ ನವ್ಯ, ಎ.ಎಸ್ ಪ್ರತಿಭಾ, ಚಿದಾನಂದ ವಿದ್ಯಾರ್ಥಿಗಳು ಹಾಜರಿದ್ದರು. ಶಾಲಾ ಆವರಣದಲ್ಲಿ ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು.










