
ಮಡಿಕೇರಿ ಸೆ.8 NEWS DESK : ವಿರಾಜಪೇಟೆ ಕಾವೇರಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ವಿಜ್ಞಾನ ಶಿಕ್ಷಕರಾದ ಬಿ.ಎಸ್.ಸುದೇಶ್ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಸರ್ಕಾರಿ/ಅನುದಾನಿತ/ಅನುದಾನ ರಹಿತ ಪ್ರಾಥಮಿಕ/ಪ್ರೌಢ ಶಾಲೆಗಳ ಶಿಕ್ಷಕರ ಸಂಘ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ತಾಲ್ಲೂಕು ಶಿಕ್ಷಕರ ಕಲ್ಯಾಣ ಸಮಿತಿ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲಿನ ಕಾಪ್ಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯಿಂದ ನೀಡಲಾದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶಲ್ಯವನ್ನು ಮತ್ತು ಆತ್ಮವಿಶ್ವಾಸ ಹೆಚ್ಚಿಸುವ ಸಲುವಾಗಿ ಇವರು ಶಿಕ್ಷಕ ವೃತ್ತಿಯಲ್ಲಿ ತೋರುವ ಅಪಾರ ಆಸಕ್ತಿ, ವಿಷಯದ ಬಗ್ಗೆ ಇರುವ ವಿಭಿನ್ನ ಬೋಧನಾ ಶೈಲಿ, ವಿದ್ಯಾರ್ಥಿಗಳೊಂದಿಗೆ ಇರುವ ಸ್ನೇಹಪರ ಹಾಗೂ ಶಿಸ್ತುಬದ್ಧ ಕಲಿಕಾ ಪ್ರಕ್ರಿಯೆ ಹಾಗೂ ಈಗಾಗಲೇ ಅಸಂಖ್ಯಾತ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಕಾರಣಕರ್ತರಾಗಿ, ಶಿಕ್ಷಕ ಸಮಾಜದಲ್ಲಿ ಅತ್ಯುತ್ತಮ ಶಿಕ್ಷಕರಾಗಿ, ಹೊರಹೊಮ್ಮಿರುವುದು ಹೆಮ್ಮೆಯ ವಿಷಯ ವಾಗಿದೆ. ಕಾವೇರಿ ಶಾಲೆಯ ಪ್ರಗತಿಗೆ ಸದಾ ಶ್ರಮಿಸುತ್ತಿರುವ ಇವರಿಗೆ ಕಾವೇರಿ ಟ್ರಸ್ಟ್ ಅಭಿನಂದನೆ ಸಲ್ಲಿಸಿದೆ. ಅದೇ ರೀತಿ 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆ ಎಂಬ ಕೀರ್ತಿ ಪಡೆದು, ಸನ್ಮಾನಿಸಲಾಯಿತು ಹಾಗೂ ಕೊಡಗು ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಗಳಿಸಿದ ವಿದ್ಯಾರ್ಥಿನಿಯಾದ ಆಶ್ರಯ್ ಅಕ್ಕಮ್ಮ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕವನ್ನು ಗಳಿಸಿದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಮಕ್ಕಳನ್ನು ಕೂಡ ಸನ್ಮಾನ ಮಾಡಲಾಯಿತು. ಸನ್ಮಾನವನ್ನು ವಿದ್ಯಾರ್ಥಿನಿಯಾದ ಕೆ.ಟಿ.ಸಮೃದ್ಧಿ ಸ್ವೀಕರಿಸಿದರು. ಈ ಸಂದರ್ಭ ಕಾವೇರಿ ಶಾಲೆಯ ಕಾರ್ಯದರ್ಶಿ ಪಿ.ಎನ್.ವಿನೋದ್, ಮುಖ್ಯ ಶಿಕ್ಷಕಿ, ಸಂಯೋಜಕಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದು, ಅವರಿಗೆ ಶುಭ ಹಾರೈಸಿದರು. ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.











