ಮಡಿಕೇರಿ ನ.5 NEWS DESK : ವಿರಾಜಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಪಿ.ವಿ.ಜಾನ್ಸನ್ ಹಾಗೂ ಸದಸ್ಯರುಗಳು ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ವಿರಾಜಪೇಟೆ ತಾಲೂಕಿನಲ್ಲಿ ನಮ್ಮ ಸರಕಾರದ ಪಂಚ ಭಾಗ್ಯಗಳ ಫಲಾನುಭವಿಗಳ ಪಟ್ಟಿ ಹಾಗೂ ವಿವರಗಳನ್ನು ಶಾಸಕರಿಗೆ ನೀಡಿ, ಮುಂದಿನ ದಿನಗಳಲ್ಲಿ ವಿರಾಜಪೇಟೆ ತಾಲೂಕು ಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ನಡೆಸಲು ಅನುಮತಿ ಕೋರಿ ಮನವಿ ಸಲ್ಲಿಸಿದರು. ಮನವಿಯನ್ನು ಪರಿಶೀಲಿಸಿದ ಶಾಸಕರು ಇದೆ ತಿಂಗಳಲ್ಲಿ ತಾಲೂಕು ಮಟ್ಟದ ಸಮಾವೇಶ ಮಾಡಲು ದಿನಾಂಕ ಹಾಗೂ ಸಮಯ ನೀಡುವ ಭರವಸೆ ನೀಡಿದರು.











