ನಾಪೋಕ್ಲು ನ.6 NEWS DESK : 2019-2022 ಅವಧಿಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಲಕ್ಷ್ಮೀನಾರಾಯಣ ಕಜೆಗದ್ದೆ ಮತ್ತು ತಂಡ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಭೇಟಿ ಮಾಡಿದರು. ಚಿಕ್ಕಮಗಳೂರಿನ ಅವರ ಸ್ವಗೃಹದಲ್ಲಿ ಭೇಟಿಯಾದ ತಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವರಿಗೆ ಅಕಾಡೆಮಿ ಅವಧಿಯಲ್ಲಿ ಹಮ್ಮಿಕೊಂಡಿದ್ದ ಮಹತ್ತರ ಯೋಜನೆಗಳಾದ ಅರೆಭಾಷೆ ಪದಕೋಶ, ಅರೆಭಾಷೆ ವಿಶ್ವಕೋಶ, ಅರೆಭಾಷೆ ವಸ್ತುಕೋಶ, ಸಾಹೇಬ್ರು ಬಂದವೆ ನಾಟಕ ತಿರುಗಾಟ ಹಾಗೂ ಗ್ರಾಮ ವಾಸ್ತವ್ಯದ ಕಲಾಚಿತ್ರ ಮುಂತಾದ ಭಾಷೆ ಮತ್ತು ಸಂಸ್ಕೃತಿ ಅಭಿವೃದ್ಧಿ ಬಗೆಗೆ ಕಾಳಜಿ ವಹಿಸಿ ಮಾಡಿರುವ ಪ್ರಾದೇಶಿಕ ಮತ್ತು ಅರೆಭಾಷೆ ಸಮುದಾಯದ ಮೈಲಿಗಲ್ಲು ಹಾಗೂ ಹೆಮ್ಮೆಯ ಕೃತಿಗಳನ್ನು ನೀಡಿದರು. ಅಕಾಡೆಮಿಯ ಮಾಜಿ ಸದಸ್ಯರಾದ ಜಾನಕಿ ಬೆಳಿಯಪ್ಪ ಗೌಡ, ಪ್ರೇಮಾ ರಾಘವಯ್ಯ ಚೊಕ್ಕಾಡಿ, ಧನಂಜಯ ಅಗೋಳಿಕಜೆ, ಸ್ಮಿತಾ ಅಮೃತರಾಜ್, ದಂಬೆಕೋಡಿ ಆನಂದ ಗೌಡ, ಡಾ.ದಯಾನಂದ ಕೂಡಕಂಡಿ, ಕುಸುಮಾಧರ ಎ.ಟಿ., ಪುರುಷೋತ್ತಮ ಕಿರ್ಲಾಯ, ಜಯಪ್ರಕಾಶ ಮೊಂಟಡ್ಕ, ಡಾ.ವಿಶ್ವನಾಥ ಬದಿಕಾನ, ಡಾ.ಪುರುಷೋತ್ತಮ ಕರಂಗಲ್ಲು, ಕಿರಣ ಕುಂಬಳಚೇರಿ, ಭರತೇಶ ಅಲಸಂಡೆಮಜಲು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತರಾದ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ವಿಶ್ವನಾಥ ಬದಿಕಾನ ದಂಪತಿಯರನ್ನು ಅಭಿನಂದಿಸಲಾಯಿತು.
ವರದಿ : ದುಗ್ಗಳ ಸದಾನಂದ.












