ಮಡಿಕೇರಿ ನ.6 NEWS DESK : ಆದಿಮಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವ ಸಮುದಾಯಕ್ಕೆ ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆಂತರಿಕ ಸ್ವಯಂ ನಿರ್ಣಯದ ಹಕ್ಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನ.7 ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಸತ್ಯಾಗ್ರಹ ನಡೆಸಿ ಸಿಎನ್‍ಸಿ ಬೇಡಿಕೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರದ ಗಮನ ಸೆಳೆಯಲಾಗುವುದು. ಕೊಡವರ ಸಾಂಪ್ರದಾಯಿಕ ಗನ್ (ತೋಕ್) ವಿನಾಯಿತಿಯನ್ನು ಸಂವಿಧಾನದ 25 ಮತ್ತು 26ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಬೇಕು. ಕೊಡವರಿಗೆ ಎಸ್‍ಟಿ ಟ್ಯಾಗ್ ನೀಡಬೇಕು, ಕೊಡವರ ರಾಜಕೀಯ ಸಬಲೀಕರಣಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಮತ್ತಿತರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.










