ಮಡಿಕೇರಿ ನ.7 NEWS DESK : ಮುಸ್ಲಿಂ ಸಮುದಾಯದ ವಿವಾಹ ಸಮಾರಂಭಗಳಲ್ಲಿ ನುಸುಳಿರುವ ಅನಗತ್ಯ ಆಚರಣೆಗಳನ್ನು ತೊಡೆದು, ಆರ್ಥಿಕ ಭಾರವನ್ನು ನಿವಾರಿಸಿಕೊಳ್ಳುವ ಅಗತ್ಯತೆಯ ಬಗ್ಗೆ ಸಮುದಾಯ ಬಾಂಧವರಲ್ಲಿ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ(ಎಸ್‍ವೈಎಸ್) ‘ಮಾದರಿ ಮದುವೆ:ಶತದಿನ ಅಭಿಯಾನ’ ಎನ್ನುವ ವಿಶಿಷ್ಟ ಕಾರ್ಯಕ್ರಮವನನ್ನು ಹಮ್ಮಿಕೊಂಡಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಎಸ್‍ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಖ್ ಅವರು ಈ ಬಗ್ಗೆ ಮಾಹಿತಿ ನೀಡಿ, ನೂರು ದಿನಗಳ ಈ ಅಭಿಯಾನಕ್ಕೆ ನ.8 ರಂದು ಎಮ್ಮೆಮಾಡಿನ ಪ್ರಸಿದ್ಧ ದರ್ಗಾದಲ್ಲಿ ವಿದ್ಯುಕ್ತ ಚಾಲನೆಯನ್ನು ನೀಡಲಾಗುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ವೈಎಸ್ ರಾಜ್ಯಾಧ್ಯಕ್ಷರಾದ ಬಶೀರ್ ಸಅದಿ ಅವರು ವಹಿಸಲಿದ್ದಾರೆ ಮತ್ತು ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ವಿನೂತನ ಅಭಿಯಾನ 2026ರ ಫೆ.15 ರಂದು ಸಮಾರೋಪಗೊಳ್ಳಲಿದೆಯೆಂದು ತಿಳಿಸಿದರು. ಇಸ್ಲಾಂ ಧರ್ಮದಲ್ಲಿ ‘ವಿವಾಹ’ ಎನ್ನುವುದು ಶ್ರೇಷ್ಠ ಸತ್ಕರ್ಮವಾಗಿರುವುದಲ್ಲದೆ, ಇದೊಂದು ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ಧಾರ್ಮಿಕ ಜವಾಬ್ದಾರಿಯೂ ಆಗಿದೆ. ಹೀಗಿದ್ದೂ ಪ್ರಸ್ತುತ ವಿವಾಹವೆನ್ನುವುದು ಅನಗತ್ಯ ಆಚರಣೆಗಳ ಆಡುಂಬೊಲವಾಗಿ, ಮಾರ್ಪಟ್ಟಿದೆ.ಎಸ್‍ವೈಎಸ್ ಹೋರಾಟಗಳಿಂದ ಪ್ರಸ್ತುತ ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಕ್ಕಳ ವಿವಾಹಕ್ಕೆ ಅಡ್ಡಿಯಾಗಿದ್ದ ವರದಕ್ಷಿಣೆಯ ಪಿಡುಗು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ, ವಿವಾಹದ ನೆಪದಲ್ಲಿ ನಡೆಯುತ್ತಿರುವ ಎಂಗೇಜ್‍ಮೆಂಟ್, ಮೆಹಂದಿ, ಹಳದಿ, ಅರೇಬಿಯನ್ ನೈಟ್, ತಾಳ ಮತ್ತಿತರ ಅನಗತ್ಯ ಆಚರಣೆಗಳು ಯುವಕರನ್ನು ಆರ್ಥಿಕವಾಗಿ ಹಿಂಡಿ ಹಿಪ್ಪೆ ಮಾಡುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದರು. ಇಸ್ಲಾಮಿನಲ್ಲಿ ವಿವಾಹವೆನ್ನುವುದು ಅತ್ಯಂತ ಸರಳವಾದ ಸುಂದರ ಸಮಾರಂಭ. ಆದರೆ, ಇಂದು ವಿವಾಹವೆನ್ನುವುದು ಆರ್ಥಿಕವಾದ ದೊಡ್ಡ ಹೊರೆಯಾಗಿ ಪರಿಣಮಿಸಿದ್ದು, ಬಡ ಯುವಕರು ವಿವಾಹವಾಗಲು ಹಿಂದೇಟು ಹಾಕುವ ಪರಿಸ್ಥಿತಿಗಳಿದೆ. ಇಂತಹ ವ್ಯವಸ್ಥೆಯನ್ನು ಬದಲಿಸುವ ಸುಧಾರಣಾ ಚಳವಳಿಯಾಗಿ ಶತದಿನ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ವಿಶಿಷ್ಟ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರತಿ ಗ್ರಾಮ ಮಟ್ಟದಲ್ಲಿ ಅಲ್ಲಿನ ಜಮಾಅತ್ ಕ್ರಿಯಾ ಸಮಿತಿಗಳನ್ನು ಮಾಡಿಕೊಂಡು, ಅದರ ವ್ಯಾಪ್ತಿಯಲ್ಲಿನ ಸಮುದಾಯ ಬಾಂಧವರನ್ನು ಭೇಟಿಯಾಗಿ ಸರಳ ವಿವಾಹದ ಮಹತ್ವವನ್ನು ತಿಳಿಸುವ, ಮನಃಪರಿವರ್ತನೆ ಮಾಡುವ ಉದಾತ್ತ ಚಿಂತನೆ ಸಂಘಟನೆಯದ್ದಾಗಿದೆಯೆಂದು ಹೇಳಿದರು. :: ಬಡ ರೋಗಿಗಳಿಗೆ ನೆರವು :: ಎಸ್‍ವೈಎಸ್ ಸಂಘಟನೆ ‘ಹೃದಯ ಹೃದಯಗಳನ್ನು ಬೆಸೆಯೋಣ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಎರಡು ತಿಂಗಳ ಹಿಂದೆ ‘ಕರಾವಳಿ ಮಣ್ಣಿನಲ್ಲಿ ಸ್ನೇಹ ಸಂಚಾರ’ ಯಾತ್ರೆ ಬಹುಧರ್ಮೀಯರ ಸಂಗಮವಾಗಿ ಯಶಸ್ಸನ್ನು ಕಂಡಿತ್ತು, ಇದರೊಂದಿಗೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಔಷಧಿಗಳಿಗಾಗಿ ಮೆಡಿಕಲ್ ಕಾರ್ಡ್ ನೀಡಲಾಗುತ್ತಿದೆ. ಇದಕ್ಕೆ ಸಂಪನ್ಮೂಲ ಕ್ರೋಢೀಕರಿಸಲು ‘ಸೇವೆಗಾಗಿ ನಿರುಪಯುಕ್ತ ವಸ್ತುಗಳ ಸಂಗ್ರಹಣೆ’ ಮಾಡಲಾಗುತ್ತಿದೆ. ಮನೆ ಮನೆಗಳಿಂದ ಸಂಗ್ರಹಿಸುವ ನಿರುಪಯುಕ್ತ ವಸ್ತುಗಳ ಮಾರಾಟದಿಂದ ದೊರಕುವ ಹಣವನ್ನು ಬಡರೋಗಿಗಳ ಔಷಧಿಗೆ ವಿನಿಯೋಗಿಸಲಾಗುತ್ತದೆಯೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್‍ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ, ರಾಜ್ಯ ಕೋಶಾಧಿಕಾರಿ ಮನ್ಸೂರ್ ಅಲಿ ತೀಥಹಳ್ಳಿ., ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಳ್ ಸಅದಿ, ಸದಸ್ಯರಾದ ಬಿ.ಯು.ಅಶ್ರಫ್ ಎಮ್ಮೆಮಾಡು, ಜಿಲ್ಲಾಧ್ಯಕ್ಷ ಮನೀರ್ ಮಹ್‍ಳರಿ ಉಪಸ್ಥಿತರಿದ್ದರು.











