ಮಡಿಕೇರಿ NEWS DESK ನ.9 : ಕೊಡವರ ಕೋವಿ ಹಕ್ಕಿನ ಕುರಿತು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎನ್‌ಸಿಯ ಕಾನೂನು ಸಲಹೆಗಾರರಾಗಿರುವ ಸುಪ್ರೀಂಕೋರ್ಟ್ ನ ಖ್ಯಾತ ವಕೀಲ ವಿಕ್ರಮ್ ಹೆಗ್ಡೆ ಅವರನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ನವದೆಹಲಿಯಲ್ಲಿ ಭೇಟಿ ಮಾಡಿದರು. ಆದಿಮಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವ ಸಮುದಾಯಕ್ಕೆ ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆಂತರಿಕ ಸ್ವಯಂ ನಿರ್ಣಯದ ಹಕ್ಕು, ಸಾಂಪ್ರದಾಯಿಕ ಗನ್ (ತೋಕ್) ವಿನಾಯಿತಿಯನ್ನು ಸಂವಿಧಾನದ 25 ಮತ್ತು 26ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸುವುದು, ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು, ಕೊಡವರ ರಾಜಕೀಯ ಸಬಲೀಕರಣ, 2026ರಲ್ಲಿ ನಡೆಯುವ ರಾಷ್ಟ್ರೀಯ ಜನಗಣತಿಯ ಸಂದರ್ಭ ಕೊಡವರು ‘ಕೊಡವ’ ಎಂದು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳುವುದರಿಂದ ಆಗುವ ಲಾಭಗಳ ಕುರಿತು ಚರ್ಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಯು.ನಾಚಪ್ಪ ಅವರು ಪ್ರಾದೇಶಿಕ ಸ್ವಾಯತ್ತತೆ ವಿಷಯಗಳ ಬಗ್ಗೆ ಪ್ರಾವೀಣ್ಯತೆ ಹೊಂದಿರುವ ವಿಕ್ರಮ್ ಹೆಗ್ಡೆ ಅವರು ಈಶಾನ್ಯ ರಾಜ್ಯಗಳು ಮತ್ತು ಲೇಹ್-ಲಡಾಖ್ ಸ್ವಾಯತ್ತತೆಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸುವಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಇದು ನಮ್ಮ ಚರ್ಚೆಗೆ ಅಮೂಲ್ಯವಾದ ದೃಷ್ಟಿಕೋನವನ್ನು ತಂದಿತು. ಈಶಾನ್ಯ ಭಾರತದಲ್ಲಿ ಅಸ್ತಿತ್ವದಲ್ಲಿರುವ ಸ್ವಾಯತ್ತ ಪ್ರದೇಶಗಳು, ಪ್ರಾದೇಶಿಕ ಮಂಡಳಿಗಳು, ಲೇಹ್ ಮತ್ತು ಲಡಾಖ್ ಸ್ವಾಯತ್ತ ಪ್ರದೇಶಗಳ ಮಾದರಿಯಲ್ಲಿ ಕೊಡವಲ್ಯಾಂಡ್ ಕಲ್ಪಿಸಬೇಕು ಎನ್ನುವ ಸಿಎನ್‌ಸಿ ಬೇಡಿಕೆಗೆ ಪುಷ್ಟಿ ಸಿಗಲಿದೆ ಎಂದರು. ಸಿಎನ್‌ಸಿ ಪಾಲಿಸಬೇಕಾದ ಗುರಿಗಳು ಮತ್ತು ಕಾನೂನುಬದ್ಧ ಆಕಾಂಕ್ಷೆಗಳನ್ನು ಸಾಧಿಸುವ ವಿಧಾನಗಳ ಕುರಿತು ಅಭಿಪ್ರಾಯಗಳ ವಿನಿಮಯಕ್ಕೆ ಈ ಭೇಟಿ ಅವಕಾಶ ಮಾಡಿಕೊಟ್ಟಿತು. ನಾವು ವಿಕ್ರಮ್ ಹೆಗ್ಡೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ವಿಕ್ರಮ್ ಹೆಗ್ಡೆ ಅವರ ಪತ್ನಿ, ಸುಪ್ರೀಂಕೋರ್ಟ್ ವಕೀಲರಾದ ಹಿಮಾ ಲಾರೆನ್ಸ್, ಸಿಎನ್‌ಸಿ ಸದಸ್ಯರಾದ ನಂದೇಟಿರ ರವಿ ಸುಬ್ಬಯ್ಯ ಹಾಗೂ ನಂದೇಟಿರ ಕವಿತಾ ಸುಬ್ಬಯ್ಯ ಉಪಸ್ಥಿತರಿದ್ದರು.










