ಮಡಿಕೇರಿ NEWS DESK ನ.10 : ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯದಲೋಪದ ಪರಿಣಾಮ ಕಾಡಾನೆ ದಾಳಿಯಿಂದ ಮತ್ತೊಂದು ಜೀವ ಬಲಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಕಾಡಾನೆಗಳ ದಾಳಿಯಾಗುತ್ತಿದ್ದು, ಬೆಳೆ ನಾಶದೊಂದಿಗೆ ಜೀವ ಬಲಿಯಾಗುತ್ತಿದೆ. ಆದರೆ ಈ ಸಮಸ್ಯೆಯನ್ನು ಅರಣ್ಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲವೆಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಆನೆ, ಮಾನವ ಸಂಘರ್ಷಕ್ಕೆ ಕೊನೆ ಇಲ್ಲದಾಗಿದೆ, ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅರಣ್ಯ ಇಲಾಖೆಗೆ ಸರಕಾರಗಳು ಸೂಚಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರಕಾರದ ಆದೇಶವನ್ನು ಪಾಲಿಸದ ಅರಣ್ಯ ಅಧಿಕಾರಿಗಳು ಕರ್ತವ್ಯಲೋಪ ಎಸಗಿದಂತ್ತಾಗಿದ್ದು, ಇವರುಗಳ ವಿರುದ್ಧ ನಿರ್ದಾಕ್ಷ್ಯಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅಧಿಕಾರಿಗಳು ಜೀವ ಹೋದ ಮೇಲೆ ಸ್ಥಳಕ್ಕೆ ಬಂದು ಮೌನಕ್ಕೆ ಶರಣಾಗುವ ಬದಲು ಇಂತಹ ಸಂಘರ್ಷ ಮರುಕಳಿಸದಂತೆ ಯೋಜನೆ ರೂಪಿಸಬೇಕು. ಅರಣ್ಯ ಇಲಾಖೆ ಎದುರು ಜನರು ನಡೆಸುವ ಪ್ರತಿಭಟನೆ ಅರಣ್ಯರೋಧನವಾಗಿದೆ. ಜಿಲ್ಲೆಯ ಜನರ ಜೀವಕ್ಕೆ ಬೆಲೆಯೇ ಇಲ್ಲದಾಗಿದೆ, ನಿರ್ಲಕ್ಷ್ಯ ತೋರುತ್ತಿರುವ ಹಿರಿಯ ಅರಣ್ಯ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತು ಕಾಡಾನೆಗಳ ದಾಳಿಯನ್ನು ನಿಯಂತ್ರಿಸದಿದ್ದಲ್ಲಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ರಾಕೇಶ್ ದೇವಯ್ಯ ಎಚ್ಚರಿಕೆ ನೀಡಿದ್ದಾರೆ.
ವನ್ಯಜೀವಿಗಳ ಉಪಟಳ ಗಂಭೀರ ಸಮಸ್ಯೆಯಾಗಿದ್ದು, ಇದರ ಪರಿಹಾರಕ್ಕೆ ಎಲ್ಲಾ ಜನಪ್ರತಿನಿಧಿಗಳು ಒಗ್ಗಟ್ಟನ್ನು ಪ್ರದರ್ಶಿಸಿ ಹಿರಿಯ ಅರಣ್ಯ ಅಧಿಕಾರಿಗಳ ಕಿವಿ ಹಿಂಡುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.










