ಮಡಿಕೇರಿ ನ.25 NEWS DESK : ಪತ್ರಕರ್ತರು ಸಮಾಜಕ್ಕೆ ಹೊರೆಯಾಗಬಾರದು ದೊರೆಯಾಗಬೇಕು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಚ್.ಬಿ. ಮದನ್ ಗೌಡ ಕರೆ ನೀಡಿದರು. ನಗರದ ಕೊಡವ ಸಮಾಜ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-28ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಮಾಣ ವಚನ ಬೋಧಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶತಮಾನೋತ್ಸವ ಹೊಸ್ತಿಲಿನಲ್ಲಿದೆ. 94 ವರ್ಷದ ಸುದೀರ್ಘ ಇತಿಹಾಸವಿರುವ, ಡಿ.ವಿ. ಗುಂಡಪ್ಪ ಅವರು ಸ್ಥಾಪಿಸಿದ ಸಂಘದ ಬೆಳವಣಿಗೆಯಲ್ಲಿ ಮಹನೀಯರು ಶ್ರಮ ಅಪಾರವಾಗಿದೆ. ರಾಜ್ಯದ 31 ಜಿಲ್ಲೆ, ಎಲ್ಲಾ ತಾಲೂಕು, ಹೋಬಳಿ ಮಟ್ಟದಲ್ಲೂ ಪತ್ರಕರ್ತರನ್ನು ಒಳಗೊಂಡ ಬಲಿಷ್ಠ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಇದರೊಂದಿಗೆ ಕರುನಾಡಿನ ಪತ್ರಕರ್ತರ ಸಮಸ್ಯೆಗಳಿಗೆ ಮಿಡಿಯುವ ಕೆಲಸವನ್ನೂ ಸಂಘ ಮಾಡುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಂಘ ಸ್ಥಾಪನೆಯಾಗಿದ್ದು, ಇಂದಿರಾ ಗಾಂಧಿ ಅವರು ಕೇಂದ್ರ ಕಚೇರಿಗೆ ಬಂದಿದ್ದರು ಎಂದು ಸ್ಮರಿಸಿದರು. ಧಾವಂತ ಪತ್ರಿಕೋದ್ಯಮ, ಸೋಶಿಯಲ್ ಮೀಡಿಯಾದ ಭರಾಟೆಯಿಂದ ಸತ್ಯಾಸತ್ಯತೆ ಅನುಮಾನ ಜನರನ್ನು ಕಾಡುತ್ತಿದೆ. ಸಾಂಪ್ರದಾಯಿಕ ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಬದ್ಧತೆ ಉಳಿಸಬೇಕು. ವೃತ್ತಿಯ ಘನತೆ, ಗೌರವ ಎತ್ತಿ ಹಿಡಿಯುವ ಕೆಲಸ ಪತ್ರಕರ್ತರಿಂದಾಗಬೇಕು ಎಂದು ಒತ್ತಿ ಹೇಳಿದರು. ಕಾರ್ಯನಿರತ ಪತ್ರಕರ್ತರ ಸಂಘ ಸದಾ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದೆ. ಆರೋಗ್ಯ ವಿಮೆ ಎಲ್ಲಾ ಪತ್ರಕರ್ತರಿಗೆ ದೊರೆಯಬೇಕು ಎಂಬ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಮುಂದಿನ ಬಜೆಟ್ ನಲ್ಲಿ ಈ ಯೋಜನೆ ಘೋಷಣೆಯಾಗುವ ವಿಶ್ವಾಸವಿದೆ. ಪತ್ರಕರ್ತರಿಗಿದ್ದ 3 ಸಾವಿರ ಮಾಸಾಶನ, ಇದೀಗ 15 ಸಾವಿರಕ್ಕೆ ತಲುಪಲು ಸಂಘ ಕಾರಣ ಎಂದರು. ಮುಖ್ಯಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಶಕ್ತಿ ದಿನ ಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ , ಯುವ ಸಮೂಹ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸರಿ-ತಪ್ಪುಗಳನ್ನು ವಿಶ್ಲೇಷಿಸುವ ಸೂಕ್ಷ್ಮ ಸಂವೇದನಶೀಲತೆ ಪತ್ರಕರ್ತರಿಗೆ ಇರಬೇಕು. ಪತ್ರಕರ್ತರು ನಿಂತ ನೀರಲ್ಲ. ಹರಿಯುವ ನದಿಯಾಗಿರುತ್ತಾರೆ. ಕ್ಷಣಕ್ಷಣಕ್ಕೆ ನಡೆಯುತ್ತಿರುವ ವಿದ್ಯಮಾನಗಳ ನಡುವೆ ಪತ್ರಕರ್ತರು ಸವಾಲಿನೊಂದಿಗೆ ಬದ್ಧತೆಯನ್ನು ರೂಢಿಸಿಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯ ವಿಚಾರದಲ್ಲಿ ರಾಜಕೀಯ ರಹಿತರಾಗಿ ಒಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ವ್ಯವಸ್ಥೆಯನ್ನು ಸಮತೋಲನ ಕಾಯ್ದುಕೊಳ್ಳುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಜನತೆಯನ್ನು ಬಡಿದೆಚ್ಚರಿಸುವುದು. ಸಾಮಾಜಿಕ ಹಿತಾಸಕ್ತಿ ವರದಿಗಳ ಮೇಲೆ ಆಡಳಿತದ ಗಮನ ಸೆಳೆಯುವ ಕರ್ತವ್ಯ ಪತ್ರಕರ್ತನ ಮೇಲಿರುತ್ತದೆ. ಸವಾಲಿನ ನಡುವೆ ಗ್ರಾಮೀಣ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಹಾಗೂ ಸರಕಾರದ ನಡುವೆ ಸಂಪರ್ಕ ಸೇತುವೆಯಾಗಿ ಪತ್ರಕರ್ತರು ಕೆಲಸ ಮಾಡಬೇಕು. ಸಂಘಟನೆಯಿಂದ ಪತ್ರಕರ್ತರ ಸಮಸ್ಯೆಗಳ ಪರಿಹಾರ ಕಾಬಹುದಾಗಿದೆ. ಮನೋಲ್ಲಾಸಕ್ಕೂ ಸಂಘ ವ್ಯವಸ್ಥೆ ಪೂರಕವಾಗಿದೆ. ಅಭಿಪ್ರಾಯಗಳ ವಿನಿಮಯ ಮೂಲಕ ಆತ್ಮಾವಲೋಕನದ ಅಗತ್ಯತೆಯೂ ಇದೆ. ಒತ್ತಡದಲ್ಲಿರುವ ಪತ್ರಕರ್ತರು ಧ್ಯಾನ, ಯೋಗದ ಮೂಲಕ ಮಾನಸಿಕ ಹಾಗೂ ದೈಹಿಕ ಅರೊಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಯುವ ಪತ್ರಕರ್ತರ ತಂಡ ಸಂಘದ ಚುಕ್ಕಾಣಿ ಹಿಡಿದಿರುವುದು ಶ್ಲಾಘನೀಯ. ಸಂಘದ ಪದಾಧಿಕಾರಿಗಳು ಹುದ್ದೆಗೆ ನ್ಯಾಯ ಕೊಡುವಂತೆ ಕೆಲಸ ಮಾಡಬೇಕು. ವ್ಯಕ್ತಿ ಆಧಾರಿತವಾಗಿರದೆ ವಿಷಯ ಆಧಾರಿತವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕೊಡಗಿನ ಪತ್ರಕರ್ತರು ಶಿಸ್ತು, ಬದ್ಧತೆ ಮೈಗೂಡಿಸಿಕೊಂಡಿದ್ದಾರೆ. ಕಾರ್ಯಾಂಗ, ನ್ಯಾಯಾಂಗ,ಶಾಸಕಾಂಗ ಸರಿದಾರಿಯಲ್ಲಿ ಸಾಗಬೇಕಾದರೆ ಪತ್ರಿಕಾ ರಂಗದ ಜವಾಬ್ದಾರಿ ದೊಡ್ಡ ಮಟ್ಟದಲ್ಲಿದೆ. ಸುದ್ದಿ ಮಾಧ್ಯಮ ನಡೆಸುವುದು ಸುಲಭದ ಮಾತಲ್ಲ. ಪತ್ರಕರ್ತರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಪತ್ರಕರ್ತರು ದೊಡ್ಡ ಮಟ್ಟದ ಸಹಾಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷೆ, ರಾಜ್ಯ ಸಮಿತಿ ಸದಸ್ಯೆ ಸವಿತಾ ರೈ ಮಾತನಾಡಿ, ಹೊಸ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ. 2018ರ ಪ್ರಾಕೃತಿಕ ವಿಕೋಪ ಸಂದರ್ಭ ರಾಜ್ಯ ಸಂಘದ ಮೂಲಕ ಸಂಕಷ್ಡಕ್ಕೀಡಾದ ಜಿಲ್ಲೆಯ ಪತ್ರಕರ್ತರಿಗೆ ಒಟ್ಟು ರೂ. 5 ಲಕ್ಷ ನೆರವನ್ನು ನೀಡಲಾಗಿದೆ. ಸಂಘ ಹೆಮ್ಮರವಾಗಿ ಬೆಳೆದಿದೆ. ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು. ನೂತನ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ವತಿಯಿಂದ ಪ್ರತಿ ತಿಂಗಳು ಒಂದು ಕಾರ್ಯಕ್ರಮ ಮಾಡುವ ಯೋಚನೆ ಇದೆ. ಎಲ್ಲಾ ಸದಸ್ಯರಿಗಾಗಿ ಅರೋಗ್ಯ ವಿಮೆ ಮಾಡಿಸುವ ಚಿಂತನೆ ಇದೆ ಎಂದರು.
ಇದೇ ವೇಳೆ ನೂತನ ಆಡಳಿತ ಮಂಡಳಿಯ ನಾಮಫಲಕ ಹಾಗೂ ಪತ್ರಕರ್ತರ ಸಾಂಸ್ಕೃತಿಕ ವೇದಿಕೆ ಲೋಗೋವನ್ನು ಗಣ್ಯರು ಅನಾವರಣ ಮಾಡಿ ಕಾರ್ಯಚಟುವಟಿಕೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರುಗಳಾದ ಎಂ.ಎನ್. ಚಂದ್ರಮೋಹನ್, ರೆಜಿತ್ ಕುಮಾರ್ ಗುಹ್ಯ, ಸಣ್ಣುವಂಡ ಕಿಶೋರ್ ನಾಚಪ್ಪ, ವಿಶ್ವ ಕುಂಬೂರು ಹಾಜರಿದ್ದರು. ಸಂಘದ ಸದಸ್ಯ ಚನ್ನನಾಯಕ ಪ್ರಾರ್ಥಿಸಿ, ಕಾರ್ಯದರ್ಶಿ ಮಲ್ಲಿಕಾರ್ಜುನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ನಿರೂಪಿಸಿ, ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್ ವಂದಿಸಿದರು.











