ಮಡಿಕೇರಿ ನ.26 NEWS DESK : ಕೇಂದ್ರ ಸರಕಾರ ಕಾರ್ಮಿಕರ ವಿರೋಧದ ನಡುವೆಯೂ ನಾಲ್ಕು ನೂತನ ಕಾರ್ಮಿಕ ಸಂಹಿತೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮುಂದಾಗಿದೆ ಎಂದು ಆರೋಪಿಸಿ ಮತ್ತು ಕಾರ್ಮಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲ ನಿಯಮಗಳನ್ನು ಕೈಬಿಡಬೇಕೆಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನ ಜಿಲ್ಲಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸಿಐಟಿಯು ಸಂಘಟನೆ ಬೆಂಬಲ ಸೂಚಿಸಿತು. ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ನಿರ್ಧಾರವನ್ನು ಖಂಡಿಸಿತು. ಕಾರ್ಮಿಕ ವಿರೋಧಿ ನೀತಿಗಳು ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಕಾರ್ಮಿಕರ ಅಳಲನ್ನು ಆಡಳಿತ ನಡೆಸುವವರು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಸಿಐಟಿಯು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಭರತ್ ಅವರು ಮಾತನಾಡಿ ಕಾರ್ಮಿಕ ವಿರೋಧಿಯಾದ ಕಾರ್ಮಿಕ ಸಂಹಿತೆಗಳನ್ನು ಏಕಪಕ್ಷೀಯವಾಗಿ ಜಾರಿಗೊಳಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಇದು ರಾಷ್ಟ್ರದ ದುಡಿಯುವ ಜನರ ವಿರುದ್ಧ ಕೇಂದ್ರ ಸರಕಾರ ತೆಗೆದುಕೊಂಡಿರುವ ಅಮಾನವೀಯ ಕ್ರಮವಾಗಿದೆ ಎಂದು ಆರೋಪಿಸಿದರು. ತೀವ್ರ ಪ್ರತಿರೋಧದ ಹೊರತಾಗಿಯೂ ಕೇಂದ್ರದಲ್ಲಿನ ಆಡಳಿತಾರೂಢ ಸರಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾಗಿದೆ. ಕಾರ್ಮಿಕರಿಗೆ ಪೂರಕವಾಗಿದ್ದ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ರೂಪಿಸುವ ಮೂಲಕ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಸಂಹಿತೆಗಳು ಉಳ್ಳವರ ಪರವಾಗಿದ್ದು, ಕಾರ್ಮಿಕರ ಹಿತಕ್ಕೆ ವಿರುದ್ಧವಾಗಿದೆ. ತಕ್ಷಣ ಈ ಸಂಹಿತೆಗಳನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಎ.ಸಿ.ಸಾಬು ಅವರು ಮಾತನಾಡಿ, ನೂತನ ಕಾರ್ಮಿಕ ಸಂಹಿತೆಗಳ ಮೂಲಕ ಕಾರ್ಮಿಕರ ದುಡಿಯುವ ಅವಧಿಯನ್ನು ಹನ್ನೆರಡು ಗಂಟೆಗಳಿಗೆ ಹೆಚ್ಚಿಸಲು ಕೇಂದ್ರ ಸರಕಾರ ಮುಂದಾಗಿದೆ. ಇದು ಕೇವಲ ಕಾರ್ಮಿಕರಿಗಷ್ಟೆ ಅಲ್ಲ, ಬಿಸಿಯೂಟ ತಯಾರಕರು, ಅಂಗನವಾಡಿ ನೌಕರರಿಗೂ ಸಂಬಧಿಸಿದ್ದಾಗಿದೆ. ಇಂತಹ ಕಾನೂನುಗಳ ಮೂಲಕ ಕೇಂದ್ರ ಸರಕಾರ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳಲು ಮುಂದಾಗಿದೆ ಎಂದು ಟೀಕಿಸಿದರು. ಬಂಡವಾಳಶಾಹಿಗಳಿಗೆ ಪೂರಕವಾಗಿರುವ ಕಾನೂನುಗಳನ್ನು ಜಾರಿಗೆ ತರುವುದರಿಂದ ಮುಂದಿನ ದಿನಗಳಲ್ಲಿ ಸರಕಾರಿ ಉದ್ಯೋಗ ಎನ್ನುವುದು ಮರೀಚಿಕೆಯಾಗಲಿದೆ. ಎಲ್ಲಾ ಸರಕಾರಿ ಇಲಾಖೆಗಳಿಗೆ ಈಗಾಗಲೇ ಗುತ್ತಿಗೆ ಆಧಾರದಲ್ಲಿ ನೌಕರರನ್ನು ಭರ್ತಿ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದೆ. ಇಂತಹ ನೌಕರರಿಗೆ ಭವಿಷ್ಯ ನಿಧಿ ಸೇರಿದಂತೆ ಮತ್ತಾವುದೇ ಸೌಲಭ್ಯಗಳು ದೊರಕುವ ಸಾಧ್ಯತೆಗಳು ಕಡಿಮೆ ಎಂದು ಕಳವಳ ವ್ಯಕ್ತಪಡಿಸಿದರು. ಖಾಸಗಿ ಕಂಪೆನಿಗಳಿಗೆ ಅನುಕೂಲತೆ ಮಾಡಿಕೊಡುವ ಇಂತಹ ಕಾನೂನು, ಸಂಹಿತೆಗಳು ಕಾರ್ಮಿಕ ಸಮೂಹಕ್ಕೆ ಮಾರಕವಾಗಿದೆ. ಕಾರ್ಮಿಕ ಸಂಹಿತೆ ಜಾರಿಯಾದಲ್ಲಿ, ಅನ್ಯಾಯಕ್ಕೆ ಒಳಗಾದ ಕಾರ್ಮಿಕರು ಕನಿಷ್ಟ ದೂರು ದಾಖಲಿಸುವ ಹಕ್ಕನ್ನು ಕಳೆದುಕೊಳ್ಳುವ ಆತಂಕವಿದೆ. ಸಂಕಷ್ಟಕ್ಕೆ ಒಳಗಾದ ಕಾರ್ಮಿಕ ದೂರು ನೀಡಿದಲ್ಲಿ, ಅದನ್ನು ಸಂಧಾನದ ಮೂಲಕ, ಮೂರು ತಿಂಗಳ ಅವಧಿಯಲ್ಲಿ ಇತ್ಯರ್ಥಪಡಿಸುವ ಪ್ರಸ್ತಾಪಗಳಿವೆ. ಇದು ಕಾರ್ಮಿಕರಿಗೆ ದೊಡ್ಡ ಪ್ರಮಾಣದಲ್ಲಿ ಅನ್ಯಾಯವೆಸಗುವ ನಿಯಮವಾಗಿದೆ. ಯಾವುದೇ ಕಾರಣಕ್ಕೂ ನೂತನ ಸಂಹಿತೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದರು. ಖಜಾಂಚಿ ಎನ್.ಡಿ.ಕುಟ್ಟಪ್ಪನ್ ಮಾತನಾಡಿ, ಕೇಂದ್ರ ಸರಕಾರ ಕಾರ್ಮಿಕ ಮತ್ತು ರೈತ ವಿರೋಧಿ ಧೋರಣೆ ತಳೆದಿದೆ. ಪಂಜಾಬಿನಲ್ಲಿ ರೈತ ವಿರೋಧಿ ಧೋರಣೆಗಳನ್ನು ವಿರೋಧಿಸಿ ರೈತರು ವರ್ಷಗಳ ಕಾಲ ಪ್ರತಿಭಟನೆ ನಡೆಸಬೇಕಾಯಿತು. ಈ ಅವಧಿಯಲ್ಲಿ ಅನೇಕ ರೈತರು ಜೀವ ಕಳೆದುಕೊಂಡಿದ್ದಾರೆ. ಇದೀಗ ಕಾರ್ಮಿಕ ಸಂಹಿತೆಗಳ ಮೂಲಕ ಕಾರ್ಮಿಕ ಸಮುದಾಯವನ್ನು ದಬ್ಬಾಳಿಕೆಗೆ ಗುರಿಪಡಿಸಲು ಕೇಂದ್ರ ಮುಂದಾಗಿದೆ ಎಂದು ಆರೋಪಿಸಿದರು. ಉಪಾಧ್ಯಕ್ಷರಾದ ಹರಿದಾಸ್, ಕುಸುಮ, ಸಹ ಕಾರ್ಯದರ್ಶಿ ಸಾಜಿ ರಮೇಶ್, ಕಾರ್ಮಿಕ ಮುಖಂಡರಾದ ಗೌರಮ್ಮ, ಆಸ್ಪತ್ರೆ ನೌಕರರ ಮುಖಂಡರಾದ ಜಾನಕಿ, ರಜಿನಿ, ರೈತ ಸಂಘದ ಮುಖಂಡರಾದ ಟಿ.ಟಿ.ಉದಯ ಕುಮಾರ್, ಅಮಿತ್, ಅಮಾಲಿ ಕಾರ್ಮಿಕ ಸಂಘದ ಮುಖಂಡರಾದ ಗಾಲಿಸಾಬ್, ಗಿರೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಮಿಕ ಸಂಹಿತೆಯ ಪ್ರತಿಗಳನ್ನು ಸುಡುವ ಮೂಲಕ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.











