ಮಡಿಕೇರಿ ನ.27 NEWS DESK : ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಈ ದೇಶದ ಸಂವಿಧಾನ ಪ್ರಪಂಚದಲ್ಲಿ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದ್ದು, ದೇಶವದ ಬಡವರನ್ನು ಬದುಕಿಸುವ ಶಾಸನವಾಗಿದೆ. ಸಂವಿಧಾನದ ಎಲ್ಲಾ ಪ್ರಯೋಜನವನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಸಾಗಬೇಕೆಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ದ.ಸಂ.ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್.ಎಲ್.ದಿವಾಕರ್ ಮಾತನಾಡಿ, ನಮ್ಮ ಸಮಿತಿಯು ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದ್ದು, ಈ ವಿದ್ಯಾರ್ಥಿ ನಿಲಯದಲ್ಲಿ ಅತಿ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಇನ್ನು ಮುಂದೆಯೂ ವಿದ್ಯಾಭ್ಯಾಸವನ್ನು ನಮ್ಮ ಧ್ಯೇಯವನ್ನಾಗಿಸಿಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಮಾಡುವತ್ತ ಶ್ರಮವಹಿಸುತ್ತೇವೆ ಎಂದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಜಿಲ್ಲಾ ಖಜಾನಾಧಿಕಾರಿ ರಘುನಾಥ್ ಅವರು ಮಾತನಾಡಿ ವಿದ್ಯಾರ್ಥಿಗಳು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಇತಿಹಾಸವನ್ನು ಓದುವ ಮೂಲಕ ಅವರನ್ನು ಸ್ಫೂರ್ತಿಯಾಗಿಸಿಕೊಂಡು ಪ್ರಮುಖ ಹುದ್ದೆಗಳಿಗೆ ಏರಬೇಕು ಎಂದರು. ಅಂಬೇಡ್ಕರ್ ಅವರ ನಿಜವಾದ ಅನುಯಾಯಿಗಳೆಂದು ಖಾತ್ರಿಪಡಿಸಬೇಕು. ಬುಧ್ದ, ಬಸವ, ಅಂಬೇಡ್ಕರ್ ಅವರ ಜೊತೆಗೆ ಸಮಸಮಾಜದ ನಿರ್ಮಾಣಕ್ಕಾಗಿ ಹೋರಾಡಿದ ಪುಲೆದಂಪತಿಗಳು ತಂದೆ ಪೆರಿಯಾರ್, ನಾರಾಯಣಗುರುಗಳಂತವರ ಇತಿಹಾಸ ತಿಳಿಯುವ ಅವಶ್ಯಕತೆ ಇದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಸಂಚಾಲಕರಾದ ದೀಪಕ್ ಪೊನ್ನಪ್ಪ, ಇತಿಹಾಸವನ್ನು ಮುಕ್ತ ಮನಸ್ಸಿನಿಂದ ಓದಿದಾಗ ಮಾತ್ರ ಮುಂದಿನ ನಮ್ಮ ಗುರಿ ಏನಿರಬೇಕೆಂಬುದು ಅರಿವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳೆಲ್ಲರೂ ಅಂಬೇಡ್ಕರ್ ಅವರ ಸಮಗ್ರ ಬರಹ ಮತ್ತು ಭಾಷಣಗಳನ್ನೊಳಗೊಂಡು ಅನೇಕ ಬಂಡಾಯ ಸಾಹಿತಿಗಳ ಬರಹವನ್ನು ಓದಬೇಕೆಂದರು. ಸಂವಿಧಾನ ದಿನದ ಪ್ರಯುಕ್ತವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಿಲಯದ ಪಾಲಕರಾದ ಗೀತಾ, ಸಮಾಜ ಕಲ್ಯಾಣ ಇಲಾಖೆಯ ವಿರೂಪಾಕ್ಷ, ಉದ್ಯಮಿಗಳಾದ ರಮೇಶ್, ಪತ್ರಕರ್ತರಾದ ಚಂದನ್ ನಂದರಬೆಟ್ಟು ಉಪಸ್ಥಿತರಿದ್ದರು.











