ಕುಶಾಲನಗರ ನ.29 NEWS DESK : ಕಾಂಗ್ರೆಸ್ ಹೈಕಮಾಂಡ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕೂಡಲೇ ಮುಖ್ಯಮಂತ್ರಿಯಾಗಿ ಘೋಷಿಸಬೇಕೆಂದು ಒತ್ತಾಯಿಸಿ ಕುಶಾಲನಗರ ತಾಲ್ಲೂಕಿನ ಒಕ್ಕಲಿಗರ ಸಮಾಜದಿಂದ ಒಕ್ಕೊರಲಿನಿಂದ ಒತ್ತಾಯದೊಂದಿಗೆ ಜಯಕಾರಗಳು ಮೊಳಗಿದವು. ತೊರೆನೂರು ಒಕ್ಕಲಿಗರ ಸಮಾಜದ ಅಧ್ಯಕ್ಷ ಟಿ.ಪಿ.ಸೋಮಶೇಖರ್ ಅವರ ನೇತೃತ್ವದಲ್ಲಿ ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಜಮಾವಣೆಗೊಂಡ ಸಮಾಜ ಬಾಂಧವರು ಹಾಗೂ ಡಿಕೆಶಿ ಅಭಿಮಾನಿಗಳು ಡಿಕೆಶಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಭಾವಚಿತ್ರ ಹಿಡಿದು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸುವ ಮೂಲಕ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಾವೇರಿ ತಾಯಿ ಹರಸಲಿ. ಶೀಘ್ರದಲ್ಲಿಯೇ ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಘೋಷಣೆಯಾಗಲಿ ಎಂದು ಒತ್ತಾಯಿಸಲಾಯಿತು. ಈ ಸಂದರ್ಭ ಮಾತನಾಡಿದ ಸಮಾಜದ ಅಧ್ಯಕ್ಷ ಸೋಮಶೇಖರ್, 2023 ರ ಚುನಾವಣೆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರ ಅವಿರತ ಶ್ರಮದ ಫಲವಾಗಿ ರಾಜ್ಯದಲ್ಲಿ ಹಿಂದೆಂದು ಕೇಳಿರದಂತಹ 136 ಸೀಟುಗಳು ಬರುವ ಮೂಲಕ ಕಾಂಗ್ರೆಸ್ ಬಹುಮತಗಳಿಂದ ಅಧಿಕಾರಕ್ಕೆ ಬಂತು. ದೈವಭಕ್ತ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಶ್ರಮದಿಂದಾಗಿ ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿ ಇರುವ ಒಕ್ಕಲಿಗರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಮತ ಹಾಕಿದ್ದರು. ಆದರೆ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಒಪ್ಪಂದದಿಂದಾಗಿ ಮೊದಲ ಅವಧಿಗೆ ಡಿಕೆಶಿ ಗೆ ಅವಕಾಸ ಕೈತಪ್ಪಿ ಹೋಗಿರುವುದರಿಂದ ಎರಡನೇ ಅವಧಿಗೆ ಮುಖ್ಯಮಂತ್ರಿ ಯಾಗಿ ಪಕ್ಷದ ಹೈಕಮಾಂಡ್ ಕೂಡಲೇ ಘೋಷಿಸಬೇಕು ಎಂದು ಆಗ್ರಹಿಸಿದರು. ತೊರೆನೂರು ಗ್ರಾಪಂ ಉಪಾಧ್ಯಕ್ಷೆಯೂ ಆದ ಒಕ್ಕಲಿಗ ಮಹಿಳಾ ಘಟಕದ ಅಧ್ಯಕ್ಷೆ ರೂಪ ಮಹೇಶ್ ಮಾತನಾಡಿ, ಒಕ್ಕಲಿಗ ಸಮುದಾಯದ ಪೂಜ್ಯರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ಹೇಳಿಕೆ ವಿರುದ್ದ ಅಪಸ್ವರ ಎತ್ತುವವರು ಎಚ್ಚರಿಕೆಯಿಂದ ಮಾತನಾಡಬೇಕು. ಸಿಎಂ ಒಳ ಒಪ್ಪಂದ ಅದು ಏನೇ ಇರಲಿ. ಈಗ ಉಳಿದ ಅರ್ಧ ಅವಧಿಗೆ ಪಕ್ಷದ ಹೈಕಮಾಂಡ್ ಡಿಕೆಶಿ ಅವರನ್ನು ಮುಖ್ಯಮಂತ್ರಿಯಾಗಿ ಕೂಡಲೇ ಘೋಷಿಸಬೇಕು ಎಂದು ಒತ್ತಾಯಿಸಿದರು. ಒಕ್ಕಲಿಗ ಸಮಾಜದ ಉಪಾಧ್ಯಕ್ಷರಾದ ಟಿ.ಎಲ್.ಮಹೇಶ್, ಕಾರ್ಯದರ್ಶಿ ಎ.ಎನ್.ರಮೇಶ್, ಗೌರವಾಧ್ಯಕ್ಷ ಟಿ.ಟಿ.ಗೋವಿಂದ, ಪ್ರಮುಖರಾದ ಟಿ.ಟಿ.ಪ್ರಕಾಶ್, ವಿ.ಟಿ.ದೇವರಾಜು, ಎ.ಕೆ.ದಿನೇಶ್, ಕೆ.ಸಿ.ಮಂಜುನಾಥ್, ಟಿ.ಪಿ.ಪುಟ್ಟರಾಜು, ಜವರಯ್ಯ, ಕೆ.ಸಿ.ಮೂರ್ತಿ, ಪಂಚಾಯಿತಿ ಸದಸ್ಯ ಟಿ.ಸಿ.ಶಿವಕುಮಾರ್ ಇದ್ದರು.











