ಮಡಿಕೇರಿ ಡಿ.10 NEWS DESK : ಸ್ಪೈಸಸ್ ಅಂಗಡಿಯೊಂದರಲ್ಲಿ ಕಿಡಿಗೇಡಿಯೊಬ್ಬ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಕುರಿತು ಅವಹೇಳನ ಮಾಡಿರುವ ಮತ್ತು ಆತನೊಂದಿಗೆ ಕೆಲವು ಯುವಕರು ಸಂಭ್ರಮಸಿರುವ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಕಿಡಿಗೇಡಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಆಗ್ರಹಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದಕ್ಕಾಗಿ ಈ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿರುವ ಕುರಿತು ಶಂಕೆ ಇದ್ದು, ತಕ್ಷಣ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ದೇಶದ ಅಭಿವೃದ್ಧಿ ಮತ್ತು ಸಾಮರಸ್ಯಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ವಿಶ್ವ ಮಟ್ಟದಲ್ಲೇ ಖ್ಯಾತಿ ಗಳಿಸಿರುವ ಪ್ರಧಾನಿ ಮೋದಿ ಅವರ ಕುರಿತು ಅವಹೇಳನ ಮಾಡಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಕೈಗೊಳ್ಳಬೇಕು ಮತ್ತು ಯಾವುದೇ ಪ್ರಭಾವಕ್ಕೆ ಮಣಿಯದೆ ಕಿಡಿಗೇಡಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಶೀಘ್ರ ಯುವಕರ ಬಂಧನವಾಗದಿದ್ದಲ್ಲಿ ಬಿಜೆಪಿ ರಸ್ತೆಗಿಳಿದು ಪ್ರತಿಭಟನೆ ನಡೆಸಲಿದೆ ಎಂದು ರಾಕೇಶ್ ದೇವಯ್ಯ ಎಚ್ಚರಿಕೆ ನೀಡಿದ್ದಾರೆ.










