ಮಡಿಕೇರಿ ಡಿ.12 NEWS DESK : ನಗರದ ಸ್ಪೈಸಸ್ ಅಂಗಡಿಯೊಂದರಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅವಹೇಳನ ಮಾಡುವ ವಿಡಿಯೋವನ್ನು ಚಿತ್ರೀಕರಿಸಿ ವೈರಲ್ ಮಾಡಿರುವ ಪ್ರಕರಣ ವ್ಯಾಪಾರಿ ಕ್ಷೇತ್ರದ ಗೌರವಕ್ಕೆ ದಕ್ಕೆ ಉಂಟು ಮಾಡಿದೆ. ಈ ರೀತಿಯ ಪ್ರಕರಣಗಳು ಮುಂದೆ ನಡೆಯದಂತೆ ವರ್ತಕ ಸಮುದಾಯ ಎಚ್ಚರದಿಂದಿರಬೇಕು ಮತ್ತು ಸಿಬ್ಬಂದಿಗಳ ಮೇಲೆ ನಿಗಾ ವಹಿಸಬೇಕು ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ನಿರ್ದೇಶಕ ಎಂ.ಧನಂಜಯ ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಧಾನಮಂತ್ರಿಗಳನ್ನು ಅವಹೇಳನ ಮಾಡಿರುವ ಪ್ರಕರಣ ರಾಜ್ಯವ್ಯಾಪಿ ಟೀಕೆಗೆ ಗುರಿಯಾಗಿದ್ದು, ವರ್ತಕ ಸಮುದಾಯ ತಲೆ ತಗ್ಗಿಸುವಂತ್ತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಜ್ಞಾವಂತರ ಜಿಲ್ಲೆ ಕೊಡಗಿನ ವರ್ತಕರು ಪ್ರವಾಸೋದ್ಯಮವನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಕಾನೂನಿಗೆ ವಿರುದ್ಧವಾದ ಈ ರೀತಿಯ ಚಟುವಟಿಕೆಗಳಿಂದ ವ್ಯಾಪಾರೋದ್ಯಮಕ್ಕೂ ಹೊಡೆತ ಬೀಳಲಿದೆ. ನಗರದ ವರ್ತಕರು ಹಾಗೂ ಅಂಗಡಿ ಮಳಿಗೆಗಳ ಮಾಲೀಕರು ತಮ್ಮ ಬಳಿ ಕಾರ್ಯನಿರ್ವಹಿಸುತ್ತಿರುವವರ ಬಗ್ಗೆ ಗಮನ ಹರಿಸಬೇಕು. ಈ ರೀತಿಯ ನಿಯಮಬಾಹಿರ ವರ್ತನೆಗಳಿಗೆ ಅವಕಾಶ ನೀಡಬಾರದು. ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗದಂತೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು. ಸಿಬ್ಬಂದಿಗಳಿಗೆ ಜೀವನದ ಆಗುಹೋಗುಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಮುಂದಾಗಬೇಕು ಎಂದು ಎಂ.ಧನಂಜಯ ತಿಳಿಸಿದ್ದಾರೆ.











