ನಾಪೋಕ್ಲು ಡಿ.12 NEWS DESK : ಮೂರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏಡ್ಸ್ ನಿಯಂತ್ರಣ ಹಾಗೂ ಹದಿಹರೆಯದವರ ಸಮಸ್ಯೆಗಳ ಕುರಿತು ಅರಿವು ಕಾರ್ಯಕ್ರಮ ನಡೆಯಿತು. ಮಡಿಕೇರಿಯ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಸೂಪರ್ವೈಸರ್ ಸುನಿತಾ ಮುತ್ತಣ್ಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಏಡ್ಸ್ ಕಾಯಿಲೆ ಹರಡುವ ಮತ್ತು ತಡೆಗಟ್ಟುವ ವಿಧಾನ, ಚಿಕಿತ್ಸೆ, ಸುರಕ್ಷತೆ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ, ಆರೋಗ್ಯಕರ ಜೀವನ ನಡೆಸುವ ಬಗ್ಗೆ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಲೈಡ್ ಶೋ ಮುಖಾಂತರ ಅರಿವು ಮೂಡಿಸಿದರು. ಏಡ್ಸ್‍ಅನ್ನು ಜಾಗೃತಿಯಿಂದ ಮತ್ತು ಜ್ಞಾನದಿಂದ ನಿಯಂತ್ರಿಸಬಹುದು. ಯುವ ಪೀಳಿಗೆ ಏಡ್ಸ್ ಮುಕ್ತ ಸಮಾಜ ನಿರ್ಮಿಸಲು ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ಹೇಳಿದರು. ಹದಿಹರೆಯದಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಸಮಸ್ಯೆಗಳು ಬರುತ್ತಿದ್ದು ಯಾವುದೇ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಕುಗ್ಗದೆ ತಮ್ಮ ಆರೋಗ್ಯದ ಬಗ್ಗೆ ತಿಳಿದುಕೊಂಡರೆ ಅವರು ಸುರಕ್ಷಿತ ಮತ್ತು ಬಲಿಷ್ಠರಾಗುತ್ತಾರೆ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಿ ಆರೋಗ್ಯಕರ ಸಂಬಂಧಗಳ ಬಗ್ಗೆ ಅರಿವು ಮೂಡಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೆÇೀಟೋ, ಖಾಸಾಗಿ ವಿಚಾರಗಳನ್ನ ವಿದ್ಯಾರ್ಥಿಗಳು ಹಂಚಿಕೊಳ್ಳುವಾಗ ಎಚ್ಚರವಹಿಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಮೂರ್ನಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಕಿ, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ದಮಯಂತಿ, ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.











