ಮಡಿಕೇರಿ ಡಿ.13 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ವಿದ್ಯಾರ್ಥಿಗಳು ಹಾಗೂ ಎನ್‍ಸಿಸಿ ವಿದ್ಯಾರ್ಥಿಗಳಿಗಾಗಿ ಕಾಲೇಜು ಮತ್ತು ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜ್ ನ ಮೈದಾನದಲ್ಲಿ ಸುಸಜ್ಜಿತ ಫೈರಿಂಗ್ ರೇಂಜನ್ನು ನಿರ್ಮಾಣ ಮಾಡಲು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘ ನಿರ್ಧರಿಸಿದೆ. ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಕಾಲೇಜ್ ನ ಸೆಮಿನಾರ್ ಹಾಲ್ ನಲ್ಲಿ ನಡೆದ ಸಂಘದ ಸಭೆಯಲ್ಲಿ ಮುಂಬರುವ ದಿನಗಳಲ್ಲಿ ನಡೆಸಲಾಗುವ ವಿವಿಧ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಸಾರ್ವಜನಿಕರು, ಹಳೇ ವಿದ್ಯಾರ್ಥಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಗುಂಡು ಹೊಡೆಯುವ ಸ್ಪರ್ಧೆಯನ್ನು ಶೀಘ್ರ ಆಯೋಜಿಸಲು ಮತ್ತು ಹಳೇ ವಿದ್ಯಾರ್ಥಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಯಿತು. ಹಳೇ ವಿದ್ಯಾರ್ಥಿ ಸಂಘಕ್ಕೆ ನೂತನ ಕಟ್ಟಡವನ್ನು ನಿರ್ಮಿಸುವ ಕುರಿತು ಚರ್ಚಿಸಿ, ಖಾತೆಯಲ್ಲಿ ಹೆಚ್ಚು ಹಣ ಇಲ್ಲದಿರುವ ಕಾರಣ ಮುಂದಿನ ದಿನಗಳಲ್ಲಿ ದಾನಿಗಳನ್ನು ಸಂಪರ್ಕಿಸಿ, ಸೂಕ್ತ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು. ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಮಾತನಾಡಿ, ಈ ಬಾರಿಯ ಮಹಾಸಭೆಯು ಅತ್ಯಂತ ಅಚ್ಚುಕಟ್ಟಾಗಿ ನಡೆದಿದ್ದು, ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಮುಂದಿನ ಮಹಾಸಭೆಗೆ ಸದಸ್ಯತ್ವವನ್ನು ಹೆಚ್ಚಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಆಡಳಿತ ಮಂಡಳಿಯ ಸದಸ್ಯರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಸಂಘ ಮತ್ತು ಕಾಲೇಜ್ ನ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಕೋರಿದರು. ಬೈಲಾನುಸಾರ ನಿರಂತರ ಮೂರು ಸಭೆಗೆ ಗೈರು ಹಾಜರಾದ ಸದಸ್ಯರು ಸದಸ್ಯತ್ವವನ್ನು ಕಳೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇದೇ ನಿಯಮವನ್ನು ಪಾಲಿಸುವುದಾಗಿ ತಿಳಿಸಿದರು. ಇದೇ ಸಂದರ್ಭ ಲೆಕ್ಕಪತ್ರ ಮಂಡಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಕಳೆದ ಸಭೆ ಹಾಗೂ ಮಹಾಸಭೆಯ ವರದಿ ವಾಚಿಸಿ, ಅನುಮೋದನೆ ಪಡೆದರು. ಸಭೆಯಲ್ಲಿ ಕಾಲೇಜ್ ನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ, ಸಂಘದ ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ, ನಿರ್ದೇಶಕರಾದ ಪೆಬ್ಬಟ್ಟೀರ ಶೀತಲ್ ಕಾರ್ಯಪ್ಪ, ಕೆ.ಹೆಚ್.ಖುರ್ಷಿದ್ ಬಾನು, ಲೋಹಿತ್ ಮಾಗಲು, ಆದರ್ಶ್ ಅದ್ಕಲೆಗಾರ್, ಎಸ್.ಆರ್.ವತ್ಸಲ ಹಾಗೂ ಬಲ್ಯದ ಚರಣ್ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಐಚಂಡ ರಶ್ಮಿ ಮೇದಪ್ಪ ಪ್ರಾರ್ಥಿಸಿದರು, ಸಬ್ಬಂಡ್ರ ಜಗದೀಶ್ ಸ್ವಾಗತಿಸಿದರು, ಆಪಾಡಂಡ ಜಾನ್ಸಿ ಗಣಪತಿ ವಂದಿಸಿದರು. *ಕ್ರೀಡಾ ಸಮಿತಿ ರಚನೆ* ಮುಂದಿನ ದಿನಗಳಲ್ಲಿ ನಡೆಯಲಿರುವ ಕ್ರೀಡಾಕೂಟಗಳಿಗೆ ಸಭೆಯಲ್ಲಿ ಕ್ರೀಡಾ ಸಮಿತಿಯನ್ನು ರಚಿಸಲಾಯಿತು. ಸಂಚಾಲಕರನ್ನಾಗಿ ಸಬ್ಬಂಡ್ರ ಜಗದೀಶ್, ದಿಶಾಂತ್ ಗಾಳಿಬೀಡು, ಐಚಂಡ ರಶ್ಮಿ ಮೇದಪ್ಪ, ಆಪಾಡಂಡ ಜಾನ್ಸಿ ಗಣಪತಿ ಹಾಗೂ ಕರವಂಡ ಸೀಮಾ ಗಣಪತಿ ಅವರನ್ನು ನೇಮಕ ಮಾಡಲಾಯಿತು.











