ಸುಂಟಿಕೊಪ್ಪ ಡಿ.13 NEWS DESK : ಪ್ರಪಂಚದಲ್ಲಿ ಒಬ್ಬರಿಂದ ಕಿತ್ತುಕೊಳ್ಳಲಾಗದ ಮತ್ತು ಅಪಹರಿಸಲಾಗದ ಸಂಪತ್ತು ಎಂದರೆ ಅದು ವಿದ್ಯೆ ಎಂದು ಸಮಾಜ ಸೇವಕ ಹರಪಳ್ಳಿ ಎನ್.ರವೀಂದ್ರ ಹೇಳಿದರು. ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ 61ನೇ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಯಲ್ಲಿರುವ ಈ ಶಾಲೆ ಕನ್ನಡ ಮಾಧ್ಯಮದಾಗಿದ್ದು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಧನೆ ಮಾಡಿದೆ ಎಂದು ಪ್ರಶಂಸಿದರು. ಬದುಕಿನಲ್ಲಿ ನಾವು ಕೊಟ್ಟು ಹೋಗಬೇಕು ಇಲ್ಲಾವೇ ಬಿಟ್ಟು ಹೋಗಬೇಕು ಈ ತತ್ವಕ್ಕೆ ಅನುಸಾರವಾಗಿ ಬದುಕಬೇಕೆಂದು ಹೇಳಿದ ಅವರು, ಸ್ವಾಮಿ ವಿವೇಕಾನಂದರು ಹೇಳಿದ ಮನುಷ್ಯನಲ್ಲಿರುವ ಪರಿಪೂರ್ಣತೆಯನ್ನು ಪ್ರಕಾಶಗೊಳಿಸುವುದೇ ವಿದ್ಯೆ. ವಿದ್ಯೆಯಿಂದ ನಮ್ಮ ಬಾಳು ಮಾತ್ರವಲ್ಲ ಸಮಾಜವನ್ನು ಬೆಳಗುವಂತಾಗಬೇಕೆಂದು ಕಿವಿಮಾತು ಹೇಳಿದರು. ನಾವು ಏನೇ ಕಲಿತರು ಎಷ್ಟೇ ದೊಡ್ಡವರಾದರೂ ಸಮಾಜಕ್ಕಾಗಿ ಮತ್ತು ಪರಹಿತಕ್ಕಾಗಿ ನಮ್ಮನ್ನು ಸಮರ್ಪಸಿಕೊಳ್ಳುವುದು ನಮ್ಮ ವ್ಯಕ್ತಿತ್ವದ ಭಾಗವಾಗಬೇಕೆಂದು ಅವರು ಕರೆ ನೀಡಿದರು. ಶಾಲೆಯ ಮಕ್ಕಳಿಗೆ ಟ್ರ್ಯಾಕ್‍ಶೂಟ್ ಕೊಡುಗೆಯಾಗಿ ನೀಡಿ ಮಾತನಾಡಿದ ಕಾಫಿ ಬೆಳೆಗಾರ ಮತ್ತು ಸಮಾಜ ಸೇವಕ ಟಿ.ಕೆ.ಸಾಯಿಕುಮಾರ್ ಅವರು, ಸರಕಾರಿ ಶಾಲೆ ಮತ್ತು ಕನ್ನಡ ಮಾಧ್ಯಮ ಶಾಲೆ ಎಂಬ ಕಿಳಾರಿಮೆ ಬೇಕಾಗಿಲ್ಲ ಸುಂಟಿಕೊಪ್ಪ ನಾಡು ಪ್ರೌಢಶಾಲೆಯು ಈ ಸಮಾಜಕ್ಕೆ ಅತ್ಯುತ್ತಮ ನಾಗರೀಕರನ್ನು ಕೊಡುಗೆಯಾಗಿ ನೀಡಿದೆ. ಈ ಪರಂಪರೆ ಮುಂದುವರಿಯುತ್ತಿರುವುದು ಶಾಲಾ ವಾರ್ಷಿಕ ವರದಿಯಲ್ಲಿ ಕಂಡು ಬರುತ್ತಿದೆ. ಇದಕ್ಕೆ ಕಾರಣರಾದ ಶಾಲಾ ಶಿಕ್ಷಕ ವೃಂದ ಅವರಿಗೆ ಸಾಥ್ ನೀಡಿದ ವಿದ್ಯಾರ್ಥಿ ಮತ್ತು ಪೋಷಕ ವೃಂದಕ್ಕೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಸಾಯಿಕುಮಾರ್ ನುಡಿದರು. ಶಾಲೆಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಕೊಡುಗೆಗಳನ್ನು ನೀಡಲಿರುವುದಾಗಿ ಅವರು ಘೋಷಿಸಿದರು. ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ರಾಜ್ಯ ಪ್ರಶಸ್ತಿ ಪುರಸ್ಕøತ ಮುಖ್ಯೋಪಾದ್ಯಾಯನಿ ಜೋವಿಟಾ ವಾಸ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಅನುದಾನಿತ ಶಾಲೆ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿತವರು ಸಮಾಜದಲ್ಲಿ ಹಿಂದೆ ಬಿದ್ದಿಲ್ಲ ವಿದ್ಯೆ ಕಲಿಸಿದ ಗುರು ನಮ್ಮ ಹೀರೋ ಆಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್, ಸರಕಾರಿ ಅನುದಾನಿತ ಶಾಲೆಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಶಾಲೆಗಳಲ್ಲಿ ವರ್ಗಾವಣೆಯಾದರೆ ಅಥವಾ ವಯೋಸಹಜ ನಿವೃತ್ತಿ ಹೊಂದಿದ್ದರೆ ಆ ಹುದ್ದೆಗಳಿಗೆ ಮರು ನೇಮಕಾತಿಗೊಳಿಸುವ ಪ್ರಕ್ರಿಯೆಯನ್ನು ಕೈ ಬಿಟ್ಟಿದೆ. ಶಿಕ್ಷಕರ ವೇತನ ಹೊರತು ಪಡಿಸಿ ಬೇರೆ ಯಾವುದೇ ಅನುದಾನವನ್ನು ನೀಡುತ್ತಿಲ್ಲ. ಶಾಲಾ ಆಡಳಿತ ಮಂಡಳಿಯು 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ವಾರ್ಷಿಕ ಶಾಲಾ ಶುಲ್ಕವನ್ನು ಪಾವತಿಸಿದ್ದು, ಶಿಕ್ಷಕ ವೃಂದದವರು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ಪ್ರಾಯೋಜಿಸಿದ್ದಾರೆಂದು ಅವರು ಹೇಳಿದರು. ಈ ಕುರಿತು ಸಮಾಜದ ಗಣ್ಯರು ಸಮಾಜ ಸೇವಕರು ಅನುದಾನಿತ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸಮಸ್ಯೆಗಳನ್ನು ಸರಕಾರದ ತರುವಂತಗಾಬೇಕೆಂದು ಅವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಬಿ.ಶಂಕರ್, ಉಪಾಧ್ಯಕ್ಷ ಎಂ.ಎ.ಕುಟ್ಟಪ್ಪ, ಆಡಳಿತ ಮಂಡಳಿ ನಿರ್ದೇಶ ಎಂ.ಎಸ್.ಸುರೇಶ್ ಚಂಗಪ್ಪ, ಭಾರತೀಯ ಎಜುಕೇಷನ್ ಟ್ರಸ್ಟ್‍ನ ಕಾರ್ಯದರ್ಶಿ ಪಿ.ಎಂ.ರಂಜಿತ್ ಕಾರ್ಯಪ್ಪ, ಕಂಬಿಬಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ನಯನ,ಗಿರಿಧರ್ ಮತ್ತು ಧರ್ಮಪ್ಪ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದ್ಯಾಯನಿ ಕೆ.ಎ.ಇಂದಿರಾ ಸ್ವಾಗತಿಸಿ, ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು. ಶಾಲಾ ಶಿಕ್ಷಕ ಶಿವಪ್ಪ ಗುರ್ಕಿ ಕಾರ್ಯಕ್ರಮ ನಿರೂಪಿಸಿದಉ, ಶಾಲಾ ಶಿಕ್ಷಕಿ ಎಂ.ಎಸ್.ದಿನೇಶ್ ಬಹುಮಾನಿತರ ವಿವರವನ್ನು ನೀಡಿದರು. ಶಿಕ್ಷಕ ಅಡ್ಡಮನಿ ವಂದಿಸಿದರು. ನಂತರ ನಡೆದ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ನೆರೆದವರ ಮನಸೂರೆಗೊಳಿಸಿತು.










