ಮಡಿಕೇರಿ ಡಿ.23 NEWS DESK : ಮಡಿಕೇರಿ ತಾಲ್ಲೂಕಿನ ‘ಮರಗೋಡು’ ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳು ಕಳೆದ ಒಂದೂವರೆ ದಶಕಗಳಿಂದ ಸೂಕ್ತ ನಿರ್ವಹಣೆ ಇಲ್ಲದೆ ಸಂಪೂರ್ಣವಾಗಿ ಹದಗೆಟ್ಟಿವೆ. ವ್ಯವಸ್ಥಿತ ರಸ್ತೆ ನಿರ್ವಹಣೆಗೆ ಆಗ್ರಹಿಸಿ ಡಿ.26 ರಂದು ಮರಗೋಡಿನಲ್ಲಿ ‘ರಸ್ತೆ ತಡೆ’ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಹಾಗೂ ಮರಗೋಡು ಆಟೋ ಚಾಲಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹದಗೆಟ್ಟ ರಸ್ತೆಗಳ ಬಗ್ಗೆ ಮಾಹಿತಿ ನೀಡಿದ ಮರಗೋಡು ಆಟೋ ಚಾಲಕರ ಸಂಘದ ಅಧ್ಯಕ್ಷ ಪಿ.ಟಿ.ನಂದಕುಮಾರ್ ಅವರು, ಮರಗೋಡು ಗ್ರಾಮವನ್ನು ಜಿಲ್ಲಾ ಕೇಂದ್ರಕ್ಕೆ ಬೆಸೆಯುವ ‘ಮಡಿಕೇರಿ-ಕತ್ತಲೆಕಾಡು-ಹುಲಿತಾಳ-ಮರಗೋಡು-ಕಟ್ಟೆಮಾಡು’ ರಸ್ತೆ ಹಾಗೂ ‘ಮರಗೋಡು-ಅರೆಕಾಡು-ಸಿದ್ದಾಪುರ’ ರಸ್ತೆ ಕನಿಷ್ಟ ದುರಸ್ತಿ ಕಾರ್ಯವನ್ನು ಕಾಣದೆ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನ ಹಾಗೂ ಜನ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿರುವುದಾಗಿ ಹೇಳಿದರು. ಕಳೆದ ಸುಮಾರು ಹದಿನೈದು ವರ್ಷಗಳಿಂದ ಮರಗೋಡು ಗ್ರಾಮ ಸಂಪರ್ಕ ರಸ್ತೆಗಳನ್ನು ದುರಸ್ತಿ ಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಕೇಳುತ್ತಲೆ ಬಂದಿದ್ದೇವೆ. ಆಯಾ ಸಂದರ್ಭಗಳಲ್ಲಿ ಆಶ್ವಾಸನೆಯಷ್ಟೆ ದೊರಕುತ್ತಿದ್ದು, ರಸ್ತೆ ದುರಸ್ತಿ ಪಡಿಸುವ ಯಾವ ಕಾರ್ಯವು ನಡೆದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಪ್ರಸಕ್ತ ಸಾಲಿನಲ್ಲಿಯೂ ರಸ್ತೆ ದುರಸ್ತಿ ಬಗ್ಗೆ ಸಂಬಂಧಪಟ್ಟವರನ್ನು ಒತ್ತಾಯಿಸಲಾಗಿದೆ. ಆ ಸಂದರ್ಭ ಮಡಿಕೇರಿ-ಕಟ್ಟೆಮಾಡು ನಡುವಣ ಸುಮಾರು 23 ಕಿ.ಮೀ. ಹದಗೆಟ್ಟ ರಸ್ತೆಯ ಕೇವಲ 5 ಕಿ.ಮೀ.ಆಯ್ದ ಭಾಗಗಳನ್ನಷ್ಟೆ ದುರಸ್ತಿ ಪಡಿಸುವ ಉತ್ತರ ಇಲಾಖೆಯಿಂದ ದೊರಕಿದೆ. ಇದಕ್ಕೆ ಯಾವ ಅರ್ಥವೆಂದು ಅವರು ಪ್ರಶ್ನಿಸಿ, ಹದಗೆಟ್ಟ ರಸ್ತೆಯಿಂದಾಗಿ ಅಗತ್ಯ ಕೆಲಸ ಕಾರ್ಯಗಳಿಗೆ ಖಾಸಗಿ ವಾಹನಗಳನ್ನು ಸ್ಥಳೀಯರು ಅವಲಂಬಿಸಬೇಕಾಗಿದೆ. ಆದರೆ, ಹೊಂಡ ಗುಂಡಿಗಳಿಂದ ಕೂಡಿರುವ ಮಾರ್ಗದಲ್ಲಿ ಬರಲು ಆಟೋ ರಿಕ್ಷಾಗಳು, ಖಾಸಗಿ ವಾಹನಗಳು ತೆರಳುವುದು ಅಸಾಧ್ಯವಾಗಿದೆ ಎಂದರು. ಹುಲಿತಾಳದಿಂದ ಮರಗೋಡಿಗೆ ಸಂಪರ್ಕಿಸುವ ರಸ್ತೆ ತೀವ್ರ ಸ್ವರೂಪದಲ್ಲಿ ಹದಗೆಟ್ಟಿರುವುದರಿಂದ ಹುಲಿತಾಳದಿಂದ ಮರಗೋಡಿಗೆ ಬರುವವರು ಪ್ರಸ್ತುತ ಹಾಕತ್ತೂರು ಗ್ರಾಮಕ್ಕಾಗಿ ಸುಮಾರು 8 ಕಿ.ಮೀ. ಬಳಸು ಹಾದಿಗಾಗಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಿ.ಟಿ.ನಂದಕುಮಾರ್ ತಿಳಿಸಿದರು. *ಸರಕಾರಿ ಬಸ್ ಸಂಕಷ್ಟ* ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಮಡಿಕೇರಿಯಿಂದ ಕತ್ತಲೆಕಾಡು, ಹುಲಿತಾಳ, ಮರಗೋಡು, ಕಟ್ಟೆಮಾಡಿಗೆ ಬೆಳಗ್ಗೆ 8.30ಕ್ಕೆ ಹಾಗೂ ಸಂಜೆ 5.45ಕ್ಕೆ ಬರುವಂತೆ ಸರ್ಕಾರಿ ಬಸ್ ವ್ಯವಸ್ಥೆ ಇತ್ತು. ಪ್ರಸ್ತುತ ಬೆಳಗ್ಗಿನ ಬಸ್ ಬಿಟ್ಟರೆ, ಸಂಜೆಯ ಬೇಳೆ ಮಡಿಕೇರಿಯಿಂದ ಬರುವ ಸರ್ಕಾರಿ ಬಸ್ ಹುಲಿತಾಳದಿಂದ ಮರಳಿ ಹೋಗುತ್ತಿರುವುದರಿಂದ ಮರಗೋಡು ವ್ಯಾಪ್ತಿಯ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮರಗೋಡನ್ನು ಸಂಪರ್ಕಿಸುವ ರಸ್ತೆಗಳನ್ನು ಪುನರ್ ನಿರ್ಮಾಣ ಮಾಡಿ, ಸಂಚಾರ ವ್ಯವಸ್ಥೆ ಸುಗಮಗೊಳಿಸಬೇಕು.ಯಾವುದೇ ಕಾರಣಕ್ಕೂ ಗುಂಡಿ ಮುಚ್ಚುವ ಕೆಲಸಕ್ಕೆ ಅವಕಾಶ ನೀಡುವುದಿಲ್ಲ, ಬೇಡಿಕೆ ಈಡೇರಿಕೆಗಾಗಿ ಮರಗೋಡು ಸುತ್ತಮುತ್ತಲ ಗ್ರಾಮಸ್ಥರೊಂದಿಗೆ ಡಿ.26 ರಂದು ಬೆಳಗ್ಗಿನಿಂದ ಸಂಜೆಯವರೆಗೆ ರಸ್ತೆತಡೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ತೊಂಡೀರ ಕೌಶಿಕ್, ಈಶ್ವರ್ ಹೆಚ್.ಎನ್, ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಬಡುವಂಡ ಪ್ರದೀಪ್, ಕಾರ್ಯದರ್ಶಿ ಇಟ್ಟಣಿಕೆ ನವನೀತ್ ಹಾಗೂ ಖಜಾಂಚಿ ಬಿ.ಎಂ.ರಂಜು ಮಹೇಶ್ ಉಪಸ್ಥಿತರಿದ್ದರು.











