ಮಡಿಕೇರಿ ಡಿ.23 NEWS DESK : ತಾಲ್ಲೂಕಿನ ಊರುಬೈಲು ಬಳಿ 43 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಕಿರು ಸೇತುವೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ನಂತರ ಚೆಂಬು ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದರು. ಬಳಿಕ ಮಾತನಾಡಿದ ಶಾಸಕರು ಮಳೆಗಾಲದಲ್ಲಿ ತುಂಬಾ ತೊಂದರೆ ಅನುಭವಿಸುವ ಗ್ರಾಮಸ್ಥರ ಅನುಕೂಲಕ್ಕಾಗಿ ಕಿರು ಸೇತುವೆಯನ್ನು ಶಾಸಕರ ನಿಧಿಯಿಂದ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಸೇತುವೆ, ಸಾರಿಗೆ ಸಂಪರ್ಕ ಮತ್ತಿತರ ಕನಿಷ್ಠ ಸೌಲಭ್ಯಗಳು ಅತ್ಯಗತ್ಯ. ಆ ನಿಟ್ಟಿನಲ್ಲಿ ಮೂಲ ಸೌಲಭ್ಯ ಒದಗಿಸಲು ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು. ಬಳಿಕ ಅನ್ಯಾಳ ಭಾಗದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಳ್ಳಲಾಗುವ ತಡೆಗೋಡೆ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ಇದೇ ಸಂದರ್ಭ ನಿರ್ಮಾಣವಾಗಿರುವ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು. ಚೆಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಶಿಕ್ಷಣ ಸಂಬಂಧ ಮಾಹಿತಿ ಪಡೆದರು. ಬಳಿಕ ಕಜೆ, ಪರ್ದಾಯ ಗದ್ದೆ ಭಾಗದಲ್ಲಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಬಹುಬೇಡಿಕೆಯ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು. ಬಳಿಕ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಲಾಗುವ ಉಚಿತ ಕೊಳವೆ ಬಾವಿ ಸಂಬಂಧ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಮೀನುಗಾರಿಕೆ ಇಲಾಖೆ ವತಿಯಿಂದ ನೀಡಲಾಗುವ ವಿವಿಧ ಸೌಲಭ್ಯಗಳನ್ನು ಎ.ಎಸ್.ಪೊನ್ನಣ್ಣ ಅವರು ವಿತರಿಸಿದರು. ಪ್ರಮುಖರಾದ ಇಸ್ಮಾಯಿಲ್, ಸುರೇಶ್, ರವಿರಾಜ್, ಜಯರಾಮ್ ಪೆರುಮುಂಡ, ಹೊಸೂರು ಸೂರಜ್, ಅಪ್ರುರವೀಂದ್ರ, ಮೊಹಿದ್ದಿನ್, ವಿಜಯಕುಮಾರ್, ಹನೀಪ್, ಇತರರು ಇದ್ದರು. ನಂತರ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಹಾಗೂ ಭೂಮಿ ಪೂಜೆಯನ್ನು ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ನೆರವೇರಿಸಿದರು. ಸಂಪಾಜೆಯ ಕೂಟೇಲು ಮತ್ತು ಕಾಂತಬೈಲು ಭಾಗದ ರಸ್ತೆ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯನ್ನು ಲೋಕಾರ್ಪಣೆ ಮಾಡಿದರು. ಕಲ್ಯಾಳ ಹಾಗೂ ಎಸ್ಟೇಟ್ ಭಾಗದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.











