ವಿರಾಜಪೇಟೆ ಡಿ.26 NEWS DESK : ಕೊಡಗಿನಲ್ಲಿ ಸುದೀರ್ಘವಾಗಿ ಒಂದು ವರ್ಷದ ಅವಧಿಗೆ 2025 ನವೆಂಬರ್ ನಿಂದ 2026 ನವೆಂಬರ್ ವರೆಗೆ ಕೊಡಗಿನ ವಿವಿಧ ಭಾಗಗಳಲ್ಲಿ ನಾಲ್ಕು ಸಾರ್ವಜನಿಕ ಕಾರ್ಯಕ್ರಮ ಹಾಗೂ 15 ಪದವಿ ಕಾಲೇಜುಗಳಲ್ಲಿ ನುಡಿ ಉತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಕೊಡಗು ಜಿಲ್ಲಾ ದಸಾಪ ದ ಅಧ್ಯಕ್ಷ ಹಾಗೂ ನುಡಿ ಉತ್ಸವ ಸಮಿತಿಯ ಅಧ್ಯಕ್ಷರಾದ ಅರ್ಜುನ್ ಮೌರ್ಯ ಮಾಹಿತಿ ನೀಡಿದರು. ವಿರಾಜಪೇಟೆಯ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನುಡಿ ನಡೆ ಯುವಜನರ ಕಡೆ ಎಂಬ ಧ್ಯೇಯ ವಾಕ್ಯದೊಂದಿಗೆ ನುಡಿ ಗೀತಗಾಯನ, ನುಡಿ ಸಾಹಿತ್ಯ ಲಹರಿ, ನುಡಿ ನೃತ್ಯ ಸಂಭ್ರಮ, ನುಡಿ ಸಂಸ್ಕೃತಿ ಗಳಂತಹ ಸ್ಪರ್ಧೆಗಳೊಂದಿಗೆ ಪದವಿ ಹಂತದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕುಂಠಿತವಾಗುತ್ತಿರುವ ಭಾಷೆಯ ಬಳಕೆ, ಭಾಷಾಭಿಮಾನ, ಸಾಹಿತ್ಯ ಅಭಿಮಾನಗಳನ್ನು ಯುವ ಜನರಲ್ಲಿ ಬೆಳೆಸುವುದರೊಂದಿಗೆ ಶ್ರೀಮಂತವಾದ ಕನ್ನಡ ನಾಡು ನುಡಿ, ಸಂಸ್ಕೃತಿ ಸಾಹಿತ್ಯ, ಪರಂಪರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದಾಗಿದೆ. ಈಗಾಗಲೇ ಲಾಂಛನವನ್ನು ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಮಾಡಲಾಗಿದ್ದು, ನಂತರ ನುಡಿ ಗೀತ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿರಾಜಪೇಟೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸವನ್ನು ಆಯೋಜಿಸಿರುತ್ತೇವೆ ಎಂದು ಹೇಳಿದರು. ಪದವಿ, ಸ್ನಾತ್ತಕೋತ್ತರ ಪದವಿ ಹಾಗೂ ತತ್ಸಮಾನ ವಿದ್ಯಾರ್ಥಿಗಳಿಗೆ ಮಾರ್ಚ್ ಕೊನೆಯ ವಾರದಲ್ಲಿ ಅಂತರ ಕಾಲೇಜು ನೃತ್ಯ ಸ್ಪರ್ಧೆ ನುಡಿ ನೃತೃ ಸಂಭ್ರಮವನ್ನು ಏರ್ಪಡಿಸಲಾಗುವುದು ಎಂದ ಅವರು ಪ್ರಥಮ 25, 000ರೂ ಹಾಗೂ ದ್ವಿತೀಯ 15,000 ರೂ ನಗದನ್ನು ಹಾಗೂ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದರು. ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದು ಹೇಳಿದರು. ನುಡಿ ಉತ್ಸವ ಸಮಿತಿ ಹಾಗೂ ಜಿಲ್ಲಾ ದಸಾಪದ ಕಾರ್ಯದರ್ಶಿ ಲಿಖಿತ್ ರೈ ಮಾತನಾಡಿ, ಯುವಜನರಿಗೆ ಭಾಷೆ ತಲುಪಬೇಕಾಗಿದೆ. ಭಾಷೆಯ ಬಗ್ಗೆ ಹೆಮ್ಮೆ ಮೂಡಿಸಲು, ಅಭಿಮಾನ ಮೂಡಿಸಲು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವೈಚಾರಿಕ ಸಾಹಿತ್ಯದ ಜತೆಗೆ ವಿದ್ಯಾರ್ಥಿಗಳಿಗೆ ಇತಿಹಾಸದ ಬಗ್ಗೆಯೂ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ. ವಿಶ್ವ ಸಾಹಿತ್ಯವನ್ನು ಕನ್ನಡದಲ್ಲಿ ಓದುವಂತಾಗಬೇಕು. ಕನ್ನಡ ಸಾಹಿತ್ಯದ ಗಟ್ಟಿತನ ಎಲ್ಲರಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನುಡಿ ಉತ್ಸವ ಸಮಿತಿಯ ಸಂಚಾಲಕರಾದ ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.











