ಮಡಿಕೇರಿ ಡಿ.29 NEWS DESK : ನೂತನವಾಗಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ವಿಚಾರ ಪ್ರಸ್ತಾಪಿಸಿ ಚರ್ಚಿಸಿದ್ದೇನೆ. ಇದಕ್ಕೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ. ಈ ನಿಟ್ಟಿನಲ್ಲಿ ಕೊಡವ ಅಭಿವೃದ್ಧಿ ನಿಗಮ ಶೀಘ್ರದಲ್ಲೇ ಘೋಷಣೆಯಾಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ. ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಂತೆ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದ ಯುನೈಟೆಡ್ ಕೊಡವ ಆರ್ಗನೈಸೇಷನ್ – ಯುಕೊ ಸಂಘಟನೆಯ ನಿಯೋಗವು ಶಾಸಕ ಪೊನ್ನಣ್ಣ ಅವರನ್ನು ವಿರಾಜಪೇಟೆಯ ಅವರ ಗೃಹ ಕಚೇರಿಯಲ್ಲಿ ಭೇಟಿಮಾಡಿ ಚರ್ಚಿಸಿತು. ಈ ಸಂದರ್ಭ ಮಾತನಾಡಿದ ಶಾಸಕರು, ಈಗಾಗಲೇ ಯುಕೊ ಸಂಘಟನೆಯ ಮಂಜು ಚಿಣ್ಣಪ್ಪನವರು ಈ ಕುರಿತು ಹೋರಾಟ ನಡೆಸುತ್ತಾ ಬಂದಿದ್ದಾರೆ. ನನ್ನೊಂದಿಗೂ ಹಲವು ಬಾರಿ ಚರ್ಚಿಸಿದ್ದಾರೆ. ಹಾಗೆಯೇ ನನ್ನ ಚುನಾವಣಾ ಪ್ರಣಾಳಿಕೆಯಲ್ಲಿಯೂ ಕೊಡವ ಅಭಿವೃದ್ಧಿ ನಿಗಮ ಸ್ಥಾಪಸುವ ಭರವಸೆ ನೀಡಲಾಗಿತ್ತು. ಹೀಗಾಗಿ ಮುಖ್ಯಮಂತ್ರಿಗಳೊಂದಿಗೆ ವಿಷಯ ಪ್ರಸ್ತಾಪಿಸಿ ಕೊಡವ ಜನಾಂಗಕ್ಕೆ ನೂತನವಾಗಿ ನಿಗಮ ಸ್ಥಾಪಿಸುವ ಅನಿವಾರ್ಯತೆ ಕುರಿತು ಮನವರಿಕೆ ಮಾಡಲಾಗಿದೆ. ಮುಖ್ಯಮಂತ್ರಿಗಳು ಸಹ ಪೂರಕವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತವಾದ ಅನುದಾನ ಮೀಸಲಿರಿಸಿ ನೂತನವಾಗಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯಾಗಲಿದೆ ಎಂದು ಭರವಸೆ ನೀಡಿದರು. ಕೊಡಗಿನ ಕೊಡವರೂ ಸೇರಿದಂತೆ ಎಲ್ಲಾ ಜನಾಂಗದ ಹಿತ ಕಾಪಾಡುವ ನಿಟ್ಟಿನಲ್ಲಿ ಯಾವುದೇ ರಾಜಿಯಿಲ್ಲ, ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ, ಕೊಡಗಿನ ಎಲ್ಲರ ಸಮಗ್ರ ಅಭಿವೃದ್ಧಿಯ ಚಿಂತನೆಯೊಂದಿಗೆ ನನ್ನ ಸೇವೆಯನ್ನು ಯಾವುದೇ ತಾರತಮ್ಯವಿಲ್ಲದೆ ನಿರ್ವಹಿಸುವುದಾಗಿ ಈ ಸಂಧರ್ಬದಲ್ಲಿ ಅವರು ಹೇಳಿದರು. ಮನವಿ ಸಲ್ಲಿಸಿ ಮಾತನಾಡಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಪ್ರಸ್ತುತ ಸರ್ಕಾರದ ಯಾವುದೇ ಸವಲತ್ತುಗಳು ಸಮಗ್ರವಾಗಿ ಕೊಡವರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಕೊಡವರಲ್ಲಿ ಶೇ. 60 ಹಿಂದುಳಿದವರಿದ್ದಾರೆ, ಶೇ.30 ಬಡತನ ರೇಖೆಗೂ ಕೆಳಗಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಸಂಸ್ಕೃತಿ ಹಾಗೂ ಪರಂಪರೆಗಳನ್ನು ಉಳಿಸಿಕೊಂಡು ಒಂದು ಜನಾಂಗದ ಸಮಗ್ರ ಅಭಿವೃದ್ಧಿಯ ಚಿಂತನೆಯೇ ದುಬಾರೀ ಎನಿಸಿಕೊಂಡಿದೆ, ಆದ್ದರಿಂದ ಸರ್ಕಾರವು ಕೊಡವರಂತಹ ಅಲ್ಪಸಂಖ್ಯಾತರ ಸಮಗ್ರ ಏಳಿಗೆಯ ಬಗ್ಗೆ ಗಮನ ಹರಿಸುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಸರ್ಕಾರವು ಕೊಡವ ಜನಾಂಗದ ಶ್ರೇಯೋಭಿವೃದ್ದಿಯ ಹಿತದೃಷ್ಠಿಯಿಂದ ಮುಂಬರುವ ಬಜೆಟಿನಲ್ಲಿಯೇ ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ನಿಯೋಗದಲ್ಲಿ ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಜೆಫ್ರಿ ಮಾದಯ್ಯ, ಅಪ್ಪಾರಂಡ ವೇಣು ಪೊನ್ನಪ್ಪ, ಪುದಿಯೊಕ್ಕಡ ದಿನೇಶ್, ಅಜ್ಜಿನಿಕಂಡ ಸೂರಜ್ ತಿಮ್ಮಯ್ಯ, ತೀತಿಮಾಡ ಬೋಸ್ ಅಯ್ಯಪ್ಪ, ಮಚ್ಚಾಮಾಡ ರಮೇಶ್, ಬಾದುಮಂಡ ವಿಷ್ಣು ಕಾರ್ಯಪ್ಪ, ಕಾವಡಿಚಂಡ ದೀಪು ಉತ್ತಯ್ಯ, ಕಡೇಮಾಡ ತಿಮ್ಮಯ್ಯ, ಚೆಪ್ಪುಡಿರ ಪ್ರತಿಮ ಕರುಂಬಯ್ಯ, ಬೊಳ್ಳಚೆಟ್ಟಿರ ಮೈನ ಕಾಳಪ್ಪ, ಕಳ್ಳಿಚಂಡ ದೀನ ಉತ್ತಪ್ಪ, ತನ್ವಿ ಉತ್ತಪ್ಪ, ಕುಂಜಿಲಂಡ ಗ್ರೇಸಿ ಪೂಣಚ್ಚ, ಕೊಣಿಯಂಡ ಕಾವ್ಯ ಸೋಮಯ್ಯ ಉಪಸ್ಥಿತರಿದ್ದರು.











