
ಮಡಿಕೇರಿ ಜ.22 NEWS DESK : ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಲು ಇಂತಹ ಕಥಾ ಸ್ಪರ್ಧೆಗಳು ದಾರಿದೀಪವಾಗಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೊಡಗಿನ ಗೌರಮ್ಮ ತಮ್ಮ ಸಾಹಿತ್ಯ ಮತ್ತು ಕತೆ, ಕವನ ರಚನೆಗಳನ್ನು ರೂಡಿಸಿಕೊಂಡಿದ್ದರು. ಕೊಡಗಿಗೆ ಗಾಂಧೀಜಿ ಭೇಟಿ ಕೊಟ್ಟ ಸಂದರ್ಭದಲ್ಲಿ ತಮ್ಮ ಮೈ ಮೇಲಿನ ಚಿನ್ನವನ್ನು ಸ್ವಾತಂತ್ರ್ಯ ಹೋರಾಟಕ್ಕೆ ದಾನ ನೀಡುವ ಮೂಲಕ ಸ್ವಾತಂತ್ರ ಹೋರಾಟಗಾರರಿಗೆ ಪ್ರೇರಣದಾಯಕರಾಗಿದ್ದರು ಎಂದು ಬ್ಲಾಸಂ ಶಾಲೆಯ ಮುಖ್ಯೋಪಾಧ್ಯಾಯನಿ ಕಟ್ಟೆಮನೆ ಅನುಸೂಯ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಗಿನ ಗೌರಮ್ಮ ಅವರ ನೆನಪಿನಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಸಣ್ಣ ಕಥೆಗಳ ಗೌರಮ್ಮ ಕಥಾಸ್ಪರ್ಧೆಯನ್ನು ಬ್ಲಾಸಂ ಶಾಲೆಯ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಮುಂದೊಂದು ದಿನ ಸಾಹಿತಿಗಳಾಗಿ ಬೆಳೆಯಲು ಈ ಕಥಾ ಸ್ಪರ್ಧೆಯು ಮೆಟ್ಟಿಲುಗಳಾಗಲಿ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತರವಾದದ್ದು. ಕನ್ನಡ ನಾಡ, ನುಡಿ, ಆಚಾರ, ವಿಚಾರ, ಸಂಸ್ಕೃತಿ, ನೆಲ-ಜಲ ಇವುಗಳನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಬೇಕು. ಮುಂದಿನ ಸಾಹಿತ್ಯ ಬೆಳವಣಿಗೆಯ ಚುಕ್ಕಾಣಿ ಹಿಡಿಯಲು ವಿದ್ಯಾರ್ಥಿಗಳು ಸಜ್ಜಾಗಬೇಕು. ಈಗಿನಿಂದಲೇ ಕತೆ ಕವನ ಗಳನ್ನು ತಮ್ಮ ಸ್ವಂತ ಆಲೋಚನಾ ಶಕ್ತಿಯಿಂದ ಬರೆಯಲು ಪ್ರಾರಂಭಿಸಬೇಕು ಎಂದರು. ಕಾರ್ಯಕ್ರಮದ ಮೊದಲಿಗೆ ಬ್ಲಾಸಂ ಶಾಲೆಯ ವಿದ್ಯಾರ್ಥಿಗಳಿಂದ ನಾಡಗೀತೆ ಏರ್ಪಡಿಸಲಾಗಿತ್ತು. ರೇವತಿ ರಮೇಶ್ ಸ್ವಾಗತಿಸಿ, ನಿರೂಪಿಸಿದರು.









