
ಮಡಿಕೇರಿ ಜ.22 NEWS DESK : ಕೊಡಗಿನ ಹಿತಚಿಂತನೆಯೊಂದಿಗೆ, ಅರಬ್ ರಾಷ್ಟ್ರಗಳಲ್ಲಿರುವ ಕೊಡಗಿನ ಮೂಲದ ಅನಿವಾಸಿ ಭಾರತೀಯರನ್ನು ಕೇಂದ್ರೀಕರಿಸಿಕೊಂಡು ಹಲವಾರು ಹಲ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘÀಟಿಸಿಕೊಂಡು ಬರುತ್ತಿರುವ ‘ಯುಎಇ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್’ ಇಪ್ಪತ್ತೈದು ವಸಂತಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದು, ತನ್ನ ಬೆಳ್ಳಿ ಹಬ್ಬವನ್ನು ‘ಕನೆಕ್ಟ್ ಕೊಡಗು-2026’ ಶೀರ್ಷಿಕೆಯಡಿ ಫೆ.8 ರಂದು ಯುಎಇನ ಶಾರ್ಜಾದಲ್ಲಿ ಆಚರಿಸಿಕೊಳ್ಳಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಅಹ್ಮದ್ ಚಾಮಿಯಾಲ್ ಈ ಕುರಿತು ಮಾಹಿತಿ ನೀಡಿ, ಯುಎಇಯ ಶಾರ್ಜಾ ಅಲ್ ಬತಾಯ ಗಾರ್ಡನ್‍ನಲ್ಲಿ ಅಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು. ಆ ಸಂದರ್ಭ ವಾಲಿಬಾಲ್, ಹಗ್ಗ ಜಗ್ಗಾಟ, ಫುಟ್ಬಾಲ್ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಜೊತೆಗೆ ಮಕ್ಕಳಿಗಾಗಿ ವಿಶೇಷ ಕ್ರೀಡೆಗಳು ಹಾಗೂ ಮಹಿಳೆಯರಿಗಾಗಿ ವಿವಿಧ ಚಟುವಟಿಕೆಗಳೂ ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿರುವುದಾಗಿ ತಿಳಿಸಿದರು. ಅಸೋಸಿಯೇಷನ್‍ನ ಸಲಹಾ ಸಮಿತಿ ನಾಯಕರಾದ ಉಸ್ಮಾನ್ ಹಾಜಿ ಅವರು ಮಾತನಾಡಿ, ಶಾರ್ಜಾದಲ್ಲಿ ಆಯೋಜಿತ ಬೆಳ್ಳಿ ಹಬ್ಬ ಸಮಾರಂಭಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು, ಜಿಲ್ಲೆಯ ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ ಸೇರಿದಂತೆ ಹಲ ಗಣ್ಯರನ್ನು ಆಹ್ವಾನಿಸಿರುವುದಾಗಿ ಮಾಹಿತಿಯನ್ನಿತ್ತರು. ಅಸೋಸಿಯೇಷನ್‍ನಿಂದ ವಿರಾಜಪೇಟೆಗೆ ತುರ್ತು ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂದು 18 ರಿಂದ 20 ಲಕ್ಷ ವೆಚ್ಚದ ಅಂಬ್ಯುಲೆನ್ಸ್ ಸೌಲಭ್ಯವನ್ನು ಈಗಾಗಲೆ ಒದಗಿಸಲಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 28 ಬಡ ಹೆಣ್ಣು ಮಕ್ಕಳ ವಿವಾಹವನ್ನು ಮಾಡಿಕೊಡಲಾಗಿದೆಯೆಂದು ಮಾಹಿತಿಯನ್ನಿತ್ತರು. ಯುಎಇನ ಶಾರ್ಜಾ, ಅಬುದಾಬಿ ಮೊದಲಾದೆಡೆ 10 ಸಾವಿರಕ್ಕೂ ಹೆಚ್ಚಿನ ಕೊಡಗಿನ ಮೂಲದ ಅನಿವಾಸಿ ಭಾರತೀಯರಿದ್ದು, ಅವರ ಯಾವುದೇ ಸಂಕಷ್ಟಗಳಿಗೆ ಅಸೋಸಿಯೇಷನ್ ಸ್ಪಂದಿಸಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಅಸೋಸಿಯೇಷನ್‍ನ ಉಪಾಧ್ಯಕ್ಷ ಅಶ್ರಫ್ ಕುಂಜಿಲ ಉಪಸ್ಥಿತರಿದ್ದರು.









