
ಮಡಿಕೇರಿ ಜ.23 NEWS DESK : ಶ್ರೀ ಕೋದಂಡ ರಾಮೋತ್ಸವ ಸಮಿತಿ ವತಿಯಿಂದ ಮಾ.25 ಮತ್ತು 26ರಂದು ಮಡಿಕೇರಿ ನಗರದಲ್ಲಿ 36ನೇ ವರ್ಷದ ರಾಮೋತ್ಸವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ. ರಾಮೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಶ್ರೀ ಕೋದಂಡ ರಾಮೋತ್ಸವ ಸಮಿತಿ ಹಾಗೂ ಭಕ್ತರ ಪೂರ್ವಭಾವಿ ಸಭೆಯನ್ನು ಫೆ.2 ರಂದು ಸಂಜೆ 4.30 ಗಂಟೆಗೆ ಶ್ರೀ ಕೋದಂಡರಾಮ ದೇವಾಲಯದ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಅವರು ತಿಳಿಸಿದ್ದಾರೆ. ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ರಾಮೋತ್ಸವದ ಯಶಸ್ಸಿಗಾಗಿ ಸಮಿತಿ ಹಾಗೂ ಉಪಸಮಿತಿಗಳನ್ನು ರಚಿಸಲಾಗುವುದು. ಶ್ರೀ ಕೋದಂಡ ರಾಮೋತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ನಗರದಲ್ಲಿರುವ ಎಲ್ಲಾ ದೇವಾಲಯಗಳ ಪದಾಧಿಕಾರಿಗಳು, ಸದಸ್ಯರು, ಸಂಘ ಸಂಸ್ಥೆಗಳ ಪ್ರಮುಖರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ. ಕಳೆದ ವರ್ಷ ಸರ್ವ ಜನರ, ಸಂಘ ಸಂಸ್ಥೆಗಳ, ಭಕ್ತರ ಹಾಗೂ ದಾನಿಗಳ ಸಹಕಾರದಿಂದ ಶ್ರದ್ಧಾಭಕ್ತಿಯ ರಾಮೋತ್ಸವ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಮತ್ತು ಅತ್ಯಂತ ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು. ಈ ಬಾರಿಯೂ ಸರ್ವರ ಸಹಕಾರವನ್ನು ಕೋರುತ್ತಿದ್ದು, ಪೂರ್ವಭಾವಿ ಸಭೆಯಲ್ಲಿ ಅಗತ್ಯ ಸಲಹೆ, ಸೂಚನೆಗಳನ್ನು ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 98807 78047 ನ್ನು ಸಂಪರ್ಕಿಸಬಹುದಾಗಿದೆ.









